ಮತದಾರರೇ ಜಾಗೃತರಾಗಿ: ಬಸವರಾಜ ಹೊರಟ್ಟಿ

0
19
loading...

ಕನ್ನಡಮ್ಮ ಸುದ್ದಿ- ಹುಬ್ಬಳ್ಳಿ: ಚುನಾವಣೆ ಬರುತ್ತೆ ಹೋಗುತ್ತೆ, ಆದರೆ ಒಳ್ಳೆ ಕೆಲಸಗಾರರಿಗೆ ಜನತೆ ಮನ್ನಣೆ ನೀಡಬೇಕು. ಜನಪ್ರತಿನಿಧಿಗಳು ನುಡಿದಂತೆ ನಡೆದರೆ ಜನ ಮರೆಯುವುದಿಲ್ಲ. ಆದ್ದರಿಂದ ಅಂಥಹ ಉತ್ತಮ ಅಭ್ಯರ್ಥಿಗೆ ಮತ ಚಲಾವಣೆ ಮಾಡುವ ಮೂಲಕ ಅವರನ್ನು ಆಯ್ಕೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಅವರು ಎಪಿಎಂಸಿ ಬಳಿಯ ಈಶ್ವರ ನಗರದ ಉದ್ಯಾನವನದಲ್ಲಿ ರವಿವಾರ ಸಂಜೆ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಣ್ಣಾ ಕೊರವಿ ಅವರ ಪರ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡುವ ವ್ಯಕ್ತಿ ಬೇಕೇ ಹೊರತು ದೊಡ್ಡ ದೊಡ್ಡ ಹೋಲ್ಡಿಂಗ್ಸ್ ಹಾಕಿಕೊಂಡು ಇನ್ನೊಮ್ಮೆ ಅವಕಾಶ ನೀಡಿ ಎಂದು ಕೈ ಮುಗಿಯುವ ವ್ಯಕ್ತಿ ಅಲ್ಲ ಎನ್ನುವುದನ್ನು ನೀವೇ ನಿರ್ಧರಿಸಿರಿ ಎಂದರು. ಪಾಲಿಕೆ ಸದಸ್ಯನಾಗಿ ರಾಜಣ್ಣಾ ಕೊರವಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿದ್ದೀರಿ. ಇಂತಹವರು ಶಾಸಕರಾದರೆ ಇನ್ನಷ್ಟು ಅಭಿವೃದ್ಧಿ ಮಾಡಬಲ್ಲರು.
ಶಾಸಕರಾಗಿ ಸತತ ಐದು ಬಾರಿ ಆಯ್ಕೆಯಾದವರು ಉತ್ತಮ ಸಾಧನೆ ಮಾಡಿದ್ದಾರೆಯೇ ಎಂದು ಜಗದೀಶ ಶೆಟ್ಟರ್ ಅವರ ಬಗ್ಗೆ ಪ್ರಶ್ನಿಸಿದ ಹೊರಟ್ಟಿ, ಈ ಬಾರಿ ನಡೆಯುವ ಚುನಾವಣೆಯಲ್ಲಿ ಎಲ್ಲ ಮತದಾರರು ಜಾಗೃತಗೊಳ್ಳುವ ಮೂಲಕ ವಿಚಾರ ಮಾಡಿ ಮತ ಚಲಾಯಿಸಬೇಕು ಎಂದರು. ಪಾಲಿಕೆ ಸದಸ್ಯನಾಗಿರುವ ರಾಜಣ್ಣಾ ಕೊರವಿ ವಾರ್ಡ ಅಭಿವೃದ್ಧಿಗೆ ಸುಮಾರು 10 ರಿಂದ 13 ಕೋಟಿಗೂ ಅಧಿಕ ಅನುದಾನವನ್ನು ಬೇರೆ ಬೇರೆ ಇಲಾಖೆಯವರಿಂದ ಕೊಡಿಸಿದ್ದಾನೆ. ಶಾಸಕನಾದರೆ ಇನ್ನು ಎಷ್ಟು ಅನುದಾನ ತರಬಹುದು ಹಾಗೂ ನೀಡಬಹುದು ಎಂಬುದನ್ನು ಎಲ್ಲರೂ ಯೋಚಿಸಬೇಕು. ರಾಜಣ್ಣಾ ಕೊರವಿ ನಿಮ್ಮ ಮನೆಯ ಸೇವಕ ಎಂದು ತಿಳಿದುಕೊಂಡು ಮತ ಚಲಾಯಿಸಿ ಉತ್ತಮ ಕೆಲಸ ಮಾಡುತ್ತಾನೆ ಎಂದು ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಇದೊಂದು ಬಾರಿ ಅವಕಾಶ ನೀಡಿ ಎಂದು ಹೊರಟ್ಟಿ ಮತಯಾಚನೆ ಮಾಡಿದರು. ರಾಜಣ್ಣಾ ಕೊರವಿ ಮಾತನಾಡಿ, ಪಾಲಿಕೆ ಸದಸ್ಯನಾಗಿ ಎರಡು ಬಾರಿ ಆಶೀರ್ವದಿಸಿರುವ ನೀವು ಒಂದು ಬಾರಿ ಶಾಸಕನಾಗಿ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಿ ಎಂದರು.

ಕಳೆದ ಹಲವು ವರ್ಷಗಳಿಂದ ಭೀಕರ ಬರಗಾಲದಿಂದ ನರಳುತ್ತಿದ್ದ ರೈತರ ನೆರವಿಗೆ ಧಾವಿಸದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕೇವಲ ಅಧಿಕಾರಕ್ಕಾಗಿ ಕಚ್ಚಾಟದಲ್ಲಿ ತೊಡಗಿವೆ. ಅವರಿಗೆ ಜನರ ನೆಮ್ಮದಿಯ ಬದುಕಿಗಿಂತ ತಮ್ಮ ಪ್ರತಿಷ್ಠೆಯೇ ದೊಡ್ಡದಾಗಿದೆ. ಹೀಗಾಗಿ ಈ ಬಾರಿ ಕುಮಾರಣ್ಣನ ಸರಕಾರ ರೈತರ ಕೈಯಲ್ಲಿ ಅಧಿಕಾರ ಎಂಬ ಸಂದೇಶ ರವಾನಿಸುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಬಿ.ಗಂಗಾಧರಮಠ, ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ದಮಯಂತಿ ಅಣ್ಣಿಗೇರಿ, ಎಚ್.ಎಚ್.ನಾಯಕ ಮಾತನಾಡಿದರು. ಬಸಣ್ಣ ಹೆಬ್ಬಳ್ಳಿ ಸ್ವಾಗತಿಸಿದರು. ಬಸವರಾಜ ಮಾಯಕಾರ, ಐ.ಎಂ.ಹಿರೇಮಠ, ಶೋಭಾ ಬಬಲಾದಿ, ಬಸಣ್ಣ ಬೆಲ್ಲದ, ಸಂಜು ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು

loading...