ಮಹದಾಯಿ ನಮ್ಮ ನೆಲದ ರೈತರ ಹಕ್ಕು: ಸೊಬರದಮಠ

0
14
loading...

ನರಗುಂದ: ಮಹದಾಯಿ ನಮ್ಮ ನೆಲದ ರೈತರ ಹಕ್ಕು. ಮಹದಾಯಿ ಯೋಜನೆ ಉತ್ತರ ಕರ್ನಾಟಕದ ರೈತರಿಗೆ ದೊರಕದ ಹೊರತು ನಾವೆಂದಿಗೂ ಈ ಸ್ಥಳದಿಂದ ಕದಲುವುದಿಲ್ಲ. ನಿರಂತರ ಧರಣಿ ಮುಂದುವರೆಯಲಿದೆ. ಬರುವ ಎ. 25 ರಂದು ಮಹದಾಯಿ ಅನುಷ್ಟಾನಗೊಳಿಸುವಂತೆ ಆಗ್ರಹಿಸಿ ದೆಹಲಿಗೆ ತೆರಳಿ ರಾಷ್ಟ್ರಪತಿಗಳಿಗೆ ಮನವಿ ನೀಡುವ ಮುನ್ನ ಅಲ್ಲಿ ಪ್ರತಿಭಟಣೆ ನಡೆಸಲಿದ್ದೇವೆ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶಸ್ವಾಮಿ ಸೊಬರದಮಠ ತಿಳಿಸಿದರು.

ಮಹದಾಯಿಗಾಗಿ ಆಗ್ರಹಿಸಿ ನರಗುಂದದಲ್ಲಿ ರೈತರು ನಡೆಸಿದ ಧರಣಿ ಗುರುವಾರ ಎ. 19 ಕ್ಕೆ 1009 ನೇ ದಿನಕ್ಕೆ ಕಾಲಿರಿಸಿದ್ದು ಸುದ್ದಿಗಾರರ ಜೊತೆ ಧರಣಿ ವೇದಿಕೆಯಲ್ಲಿ ಮಾತನಾಡಿದ ಅವರು, ರೈತರು ಹಾಗೂ ಮಹಿಳಾ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ. ಮಹದಾಯಿ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ 13 ತಾಲೂಕುಗಳಿಂದ ಸುಮಾರು 200 ರೈತರು ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ. ನಮ್ಮದು ರೈತ ಬದುಕು ಸಾಕಷ್ಟು ಹಣಕಾಸಿನ ಸಂಗ್ರಹ ಬೇಕಾಗಿದೆ. ಆದಷ್ಟು ವ್ಯಾಪಾರಸ್ಥರು, ದಾನಿಗಳು, ಸಾರ್ವಜನಿಕರು ಮಹದಾಯಿಗಾಗಿ ಅಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ತೆರಳುವ ರೈತರಿಗೆ ಹಣಕಾಸಿನ ನೆರವು ನೀಡಬೇಕೆಂದು ಕೋರಿದರು. ಧರಣಿಯಲ್ಲಿ ಇದುವರೆಗೂ ನಿರತಗೊಂಡ ಮಹದಾಯಿ ಮಲಪ್ರಭಾ ಜೋಡನಾ ಹೋರಾಟ ಸಮಿತಿ ಅಧ್ಯಕ್ಷ ಈರಬಸಪ್ಪ ಹೂಗಾರ ದೂ: 9901635275 ಅವರನ್ನು ಸಂಪರ್ಕಿಸಿ ದಾನಿಗಳು ಧನಸಹಾಯ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು. ಮಹದಾಯಿ ಅನುಷ್ಟಾನಗೊಳಿಸಿ ಇಲ್ಲವೇ ಮಹದಾಯಿಗಾಗಿ ಇದುವರೆಗೂ ನಡೆಸಿದ ಧರಣಿಯಲ್ಲಿ ಭಾಗವಹಿಸಿರುವ ರೈತರಿಗೆ ದಯಾಮರಣ ಆದೇಶ ನೀಡಿ ಎಂದು ವಿನಂತಿಸುವ ಬೇಡಿಕೆ ಮನವಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು ಎಂದು ವಿರೇಶಸ್ವಾಮಿ ಸೊಬರದಮಠ ತಿಳಿಸಿದರು.
ಮಹದಾಯಿ ಮಲಪ್ರಭಾ ನದಿ ಜೋಡಣಾ ಹೋರಾಟ ಸಮಿತಿ ಉಪಾಧ್ಯಕ್ಷ ರಮೇಶ ನಾಯ್ಕರ್, ಎಸ್.ಬಿ. ಜೋಗಣ್ಣವರ, ಮಹಂತೇಶ ನಂದಿ, ವಿಜಯ ಕೋತಿನ, ಯಲ್ಲಪ್ಪ ಹುಜರತ್ತಿ, ಬಸನಗೌಡ ಪಾಟೀಲ, ಈರಣ್ಣ ಗಡಗಿಶೆಟ್ಟರ, ಎಸ್.ಬಿ. ಕೊಣ್ಣುರ, ಅರ್ಜುನ ಮಾನೆ, ವಾಸು ಚವ್ಹಾಣ, ಕಾಕಪ್ಪ ಕಾಡಪ್ಪನವರ ಹಾಗೂ ಮಹಿಳಾ ರೈತರು ಉಪಸ್ಥಿತರಿದ್ದರು.

loading...