ಮಹದಾಯಿ ನೀರಿನ ಬೇಡಿಕೆ ರೈತರ ಜೀವನಾಡಿ: ಡಾ. ರಂಗನಾಥ

0
12
loading...

ನರಗುಂದ: ಮಹದಾಯಿ ನೀರಿನ ಬೇಡಿಕೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ 11 ತಾಲೂಕುಗಳ ರೈತರ ಜೀವನಾಡಿಯಾಗಿದ್ದು ಈ ಯೋಜನೆ ಅನುಷ್ಟಾನಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರದಿಂದ ಗೋವಾ ಹಾಗೂ ಮಹರಾಷ್ಟ್ರಗಳ ಮನವೊಲಿಸಲು ಶ್ರಮಿಸಬೇಕಾಗಿತ್ತು. ಆದರೆ ಅದನ್ನು ನಿರ್ಲಕ್ಷಮಾಡಿದ ಸರ್ಕಾರಗಳು ರೈತರ ಬೆಂಬಲಕ್ಕೆ ಕೊಂಚವೂ ಮನ್ನನೇ ನೀಡದಿರುವುದು ಖೇಧಕರವೆಂದು ಬೆಂಗಳೂರಿನ ಸಹ್ಯಾದ್ರಿ ಜಲ-ಜನ ಸೋಸೈಟಿಯ ಉಪಾಧ್ಯಕ್ಷ ಡಾ. ಎಂ.ಆರ್. ರಂಗನಾಥ ಸರ್ಕಾರಗಳ ವೈಖರಿಯನ್ನು ಟೀಕಿಸಿದರು.

ನರಗುಂದದಲ್ಲಿ ಮಹದಾಯಿಗಾಗಿ ಆಗ್ರಹಿಸಿ ನಡೆಸುತ್ತಿರುವ ರವಿವಾರದ 1012 ನೇ ದಿನದ ರೈತರ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹ್ಯಾದ್ರಿ ಜಲ-ಜನ ಸೋಸೈಟಿಯು ನೀರಿನ ಸಂಪನ್ಮೂಲತೆಗಾಗಿ ಮತ್ತು ನೀರಾವರಿ ಯೋಜನೆಗಳಿಗಾಗಿ ಸರ್ಕಾರಗಳ ಜೊತೆ ಒಪ್ಪಂದ ಮಾಡಿಕೊಂಡು ನೀರಾವರಿ ಯೋಜನೆಗಳ ಅನುಷ್ಟಾನದ ಸಂಕಲ್ಪಕ್ಕಾಗಿ ಶ್ರಮಿಸುತ್ತಿದೆ. ಈ ಸೊಸೈಟಿಯು ಕರ್ನಾಟಕ ಸೇರಿದಂತೆ ಗೋವಾ, ಕೇರಳ ಪಾಂಡಿಚೇರಿ ಮತ್ತು ತಮಿಳುನಾಡು ಹಾಗೂ ಮಹರಾಷ್ಟ್ರ, ಸೀಮಾಂದ್ರ ಸೇರಿ ಕಳೆದ ಒಂದು ವರ್ಷದ ಹಿಂದೆ ರಚಿತಗೊಂಡಿದೆ. ಈ ಸೊಸೈಟಿಯಲ್ಲಿ ಸುಮಾರು 500 ನಿವೃತ್ ಇಂಜನೀಯರ್‍ಗಳಿದ್ದಾರೆ. ಈ ಸೊಸೈಟಿಯು ಮಹದಾಯಿಗಾಗಿ ಶ್ರಮಪಡಲು ನಿರ್ಣಯಿಸಿದೆ. ನರಸಿಂಹಪುರದ ಬಳಿ ತುಂಗಭದ್ರಾ ನದಿಯ ನೀರನ್ನು ಮಳೆಗಾಲದಲ್ಲಿ ಜಾಕವೆಲ್ ಮುಖಾಂತರ ಶೇಖರಿಸಿ ನಂತರ ಕತ್ತಿಗೆ, ಸವಳಂಗ ಕೆರೆಗೆ ನೀರು ತುಂಬಿಸಿ ಸುಮಾರು 30 ಸೊಸೈಟಿಗಳನ್ನು ಮಾಡಿ ರೈತರಿಗೆ ಅನುಕೂಲ ಕಲ್ಪಿಸಿಕೊಡಲು ಸಹ ನಿರ್ಣಯಿಸಿದೆ. ಸರ್ಕಾರ ಅನುಷ್ಟಾನಗೊಳಿಸುವ ಎಲ್ಲ ನೀರಾವರಿ ಯೋಜನೆಗಳಿಗೂ ಸಹಕಾರಿ ನೀಡುವ ಮತ್ತು ಶೇ. 40 ರಷ್ಟು ನೀರಾವರಿ ಯೋಜನೆಗೆ ಹಣಕಾಸು ಒದಗಿಸುವ ಕಾರ್ಯಕ್ಕೆ ಸೊಸೈಟಿ ಸರ್ಕಾರಗಳ ಜೊತೆ ಮಾತುಕತೆ ನಡೆಸಿ ಪೂರ್ಣಗೊಳಿಸಿದೆ. ಸೊಸೈಟಿಯ ಪೋಷಕರಾಗಿ ಸುಪ್ರೀಂ ಕೋರ್ಟಿನ ನಿವೃತ್ ಮುಖ್ಯ ನ್ಯಾಯಾಧೀಶ ಎಂ.ಎನ್. ವೆಂಕಟಾಚಲಯ್ಯ ಹಾಗೂ ನಿವೃತ್ತ ವಿಧಾನಪರಿಷತ್ ಸದಸ್ಯರಾದ ಅಣ್ಣಾ ವಿನಯಚಂದ್ರ ಅವರು ಕಾಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತಿದ್ದಾರೆ. ನೀರಾವರಿ ಯೋಜನೆಗಳನ್ನು ಸರ್ಕಾರ ಅನುಷ್ಟಾನಗೊಳಿಸುವ ಎಲ್ಲ ಭಾಗಗಳಲ್ಲಿ ಸ್ಮಾರ್ಟ ವಿಲ್ಜೇಜ್ ಮಾಡುವ ನಿರ್ಧಾರವನ್ನು ಸೊಸೈಟಿ ತಾಳಿದೆ. ಮಹದಾಯಿ ಯೋಜನೆ ವಿಚಾರಣೆಯನ್ನು ನ್ಯಾಯಮಂಡಳಿ ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ಪೂರ್ಣಗೊಳಿಸಿದ್ದು ಇದರ ಆದೇಶ ಬರುವ ಅಗಷ್ಟದಲ್ಲಿ ಹೊರಬೀಳಲಿದೆ. ರಾಜ್ಯದ ಪರ ಆದೇಶಬರಬಹುದಾಗಿದೆ ಎಂಬ ಮಾಹಿತಿ ದೊರಕಿದ್ದು ಈ ಆದೇಶದ ನಂತರ ಮಹದಾಯಿ ಅನುಷ್ಟಾನದ ಯೋಜನೆ ಕಾರ್ಯಾರಂಭ ಸರ್ಕಾರ ನಡೆಸಲು ಮುಂದಾದ ಸಂದರ್ಭದಲ್ಲಿ ಶೇ. 40 ರಷ್ಟು ಹಣಕಾಸಿನ ನೆರವನ್ನು ಸಹ ಸಹ್ಯಾದ್ರಿ ಜಲ-ಜನ ಸೊಸೈಟಿಯು ಒದಗಿಸಲಿದೆ ಎಂದು ಅವರು ತಿಳಿಸಿದರು.
ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶಸ್ವಾಮಿ ಸೊಬರದಮಠ ಮಾತನಾಡಿ, ಮಹದಾಯಿ ಯೋಜನೆ ಅನುಷ್ಟಾನಗೊಳಿಸಲು ಸರ್ಕಾರಗಳು ಯಾವುದೇ ನಿರ್ಧಾರ ವ್ಯಕ್ತಪಡಿಸಲಿಲ್ಲ. ಹೀಗಾಗಿ ರೈತರು ನೊಂದುಕೊಂಡಿದ್ದಾರೆ. ರಾಷ್ಟ್ರಪತಿಗಳನ್ನು ಎ. 25 ರಂದು ರೈತರು ಬೇಟಿಯಾಗಿ ಮನವಿ ನೀಡಲಿದ್ದಾರೆ. ಯೋಜನೆ ಅಸಾಧ್ಯವೆಂದಾದರೆ ದಯಾಮರಣ ಕರುಣಿಸಿ ಎಂದು ಸಹ ರಾಷ್ಟ್ರಪತಿಗಳಲ್ಲಿ ಮನವಿ ಮಾಡಿಕೊಳ್ಳಲಿದ್ದೇವೆ. ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ 11 ತಾಲೂಕಿನ ಸುಮಾರು 400 ರೈತರು ದೆಹಲಿ ಚಲೋ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರಪತಿಗಳ ಕಾರ್ಯಾಲಯದ ಅಧಿಕಾರಿಗಳು ಪ್ರತಿಭಟಣೆ ಹಿಂತೆಗೆದುಕೊಳ್ಳಿ ಎಂದು ಸಹ ರೈತ ಸಂಘಟಣೆಗೆ ತಿಳಿಸಿದ್ದಾರೆ. ಆದರೆ ನಾವು ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿಯದೇ ದೆಹಲಿ ಛಲೋ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ತಿಳಿಸಿದರು.

ಸಹ್ಯಾದ್ರಿ ಜಲ-ಜನ ಸೊಸೈಟಿಯ ರಾಜ್ಯ ಗೌರವಾಧ್ಯಕ್ಷ ಉಮಾನಾಥ, ಹೊನ್ನಾಳಿ ನಾರಾಯನ, ಎಂ.ಜಿ. ಕಾಂತಪ್ಪಗೌಡ್ರ, ರಮೇಶ ನಾಮೋಳಿ, ಮಹದಾಯಿ ಮಲಪ್ರಭೆ ಜೋಡನಾ ಹೋರಾಟ ಸಮಿತಿ ಅಧ್ಯಕ್ಷ ಈರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಅರ್ಜುನ ಮಾನೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.

loading...