ಮಹನೀಯರ ಆದರ್ಶ ತತ್ವಗಳನ್ನು ರೂಢಿಸಿಕೊಳ್ಳಿ: ಅಶ್ವಿನಿ

0
12
loading...

ಕನ್ನಡಮ್ಮ ಸುದ್ದಿ-ಶಿರಸಿ: ರಾಷ್ಟ್ರಸೇವೆಯ ಮೂಲಕ ಹಾಗೂ ರೂಢಿಸಿಕೊಂಡು ಬಂದ ಅಪರೂಪದ ಜನಪರ ವ್ಯಕ್ತಿತ್ವದ ಪರಿಣಾಮ ಡಾ. ಬಾಬು ಜಗಜೀವನರಾಮ್‌ ಅವರು ದೇಶದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದವರಾಗಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ಕೆ.ಎನ್‌ ಹೊಸಮನಿ ಹೇಳಿದರು.
ನಗರದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಗುರುವಾರ ಆಚರಿಸಲಾದ ಡಾ.ಬಾಬು ಜಗಜೀವನರಾಂ ಅವರ 111ನೇ ಜಯಂತಿ ಅಂಗವಾಗಿ ವಿಶೆಷ ಉಪನ್ಯಾಸ ನೀಡಿದ ಅವರು, ಜಗಜೀವನರಾಮ್‌ ಅವರು ನಿಷ್ಠುರ ರಾಜಕಾರಣಿಯಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ನಡೆಸಿದ್ದಾರೆ ಎಂದರು.
ಹಿಂದೂಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪರಿಶ್ರಮಿಸಿದ ಅಪರೂಪದ ವ್ಯಕ್ತಿ ಅವರಾಗಿದ್ದರು. ಹಿಂದುಳಿದ ವರ್ಗಗಳ ಸಾಮಾನ್ಯ ಜನತೆಯ ಕಲ್ಯಾಣಕ್ಕಾಗಿ ಅನೇಕ ಹೋರಾಟಗಳನ್ನು ದೇಶಾದ್ಯಂತ ನಡೆಸಿ ಯಶಸ್ವಿಯಾಗಿದ್ದಾರೆ ಎಂದರು.
ನಗರಸಭೆ ಪೌರಾಯುಕ್ತೆ ಅಶ್ವಿನಿ.ಬಿ.ಎಂ. ಮಾತನಾಡಿ, ಸರ್ಕಾರ ಪ್ರತಿವರ್ಷ ಮಹನಿಯರ ಜಯಂತಿಗಳು ಹೆಚ್ಚು ಹೆಚ್ಚು ಆಚರಣೆ ಮಾಡುತ್ತಿದ್ದಾರೆ. ಜಯಂತಿಗಳನ್ನು ಕಾಟಾಚಾರಕ್ಕೆ ಆಚರಣೆ ಮಾಡದೆ ಮಹನೀಯರ ಆದರ್ಶ ತತ್ವಗಳನ್ನು ಜನಸಾಮಾನ್ಯರು ರೂಢಿಸಿಕೊಳ್ಳುವಂತೆ ಪ್ರೇರೇಪಿಸುವ ಕಾರ್ಯ ಮಾಡಬೇಕು. ಸರ್ಕಾರದ ಆಚರಣೆಗಳು ಜನಸಾಮಾನ್ಯರಿಗೆ ಸರಿಯಾಗಿ ತಲುತ್ತಿಲ್ಲವೊ ಎಂಬ ಕಳವಳ ಉಂಟಾಗುತ್ತಿದೆ ಎಂದರು.
ಸರ್ಕಾರಿ ಕಾರ್ಯಕ್ರಮದ ರೀತಿಯಲ್ಲಿ ಆಚರಣೆ ಮಾಡುತ್ತಿದ್ದೇವೆಂಬ ಕಳವಳ ಉಂಟಾಗುತ್ತಿದೆ. ತತ್ವಜ್ಞಾನಿಗಳು ಜಗತ್ತಿಗೆ ಸಾರಿದ ಜನಪರ ಸಂದೇಶಗಳನ್ನು ಜಯಂತಿಗಳಲ್ಲಿ ಪಾಲ್ಗೊಂಡ ನಾವೆಲ್ಲರೂ ಜೀವನದಲ್ಲಿ ರೂಢಿಸಿಕೊಂಡಿದ್ದೇವೆಯೆ ಎಂದು ಆತ್ಮವಿಮರ್ಷೆ ಮಾಡಿಕೊಳ್ಳಬೇಕು ಎಂದರು.
ಶಿರಸಿ ಉಪವಿಭಾಗಾಧಿಕಾರಿ ರಾಜಶೇಖರ ಡಂಬರ ಕಾರ್ಯಕ್ರಮ ಉದ್ಘಾಟಿಸಿದರು. ತಹಶಿಲ್ದಾರ ಕುಲಕರ್ಣಿ ಉಪಸ್ಥಿತರಿದ್ದರು. ಕಿರಣ ನಾಯ್ಕ್‌ ವಂದಿಸಿದರು.

loading...