ಮಾಜಿ ಶಾಸಕ ಪ್ರಹ್ಲಾದ ರೇಮಾಣಿ ಪುತ್ರನಿಗೆ ಟಿಕೆಟ್‌ ನೀಡಲು ಆಗ್ರಹ

0
32
loading...

ಕನ್ನಡಮ್ಮ ಸುದ್ದಿ-ಖಾನಾಪುರ: ಸ್ಥಳೀಯ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಜಿ ಶಾಸಕ ದಿವಂಗತ ಪ್ರಹ್ಲಾದ ರೇಮಾಣಿ ಅವರ ಪುತ್ರ, ನಂದಗಡ ಕ್ಷೇತ್ರದ ಮಾಜಿ ಜಿಪಂ ಸದಸ್ಯ ಜ್ಯೋತಿಬಾ ರೇಮಾಣಿ ಅವರಿಗೆ ಟಿಕೆಟ್‌ ನೀಡುವಂತೆ ಪಕ್ಷದ ಮುಖಂಡ ಮಹಾಂತೇಶ ಸಾಣಿಕೊಪ್ಪ ಪಕ್ಷದ ವರಿಷ್ಠರನ್ನು ಆಗ್ರಹಿಸಿದರು.
ಪಟ್ಟಣದ ಶಿವಸ್ಮಾರಕ ಸಭಾಗೃಹದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಮುಖಂಡರ, ಕಾರ್ಯಕರ್ತರ ಮತ್ತು ತಾಲೂಕು ಮಟ್ಟದ ಜನಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಶಾಸಕ ರೇಮಾಣಿಯವರು ತಮ್ಮ ಅವಧಿಯಲ್ಲಿ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡು ಕ್ಷೇತ್ರದ ಮತದಾರರ ಮನಗೆದ್ದಿದ್ದರು. ಅವರ ಪುತ್ರ ಜ್ಯೋತಿಬಾ ಸಹ ಒಂದು ಅವಧಿಯ ಜಿಪಂ ಸದಸ್ಯರಾಗಿ ಕೆಲಸ ಮಾಡಿ ರಾಜಕೀಯ ಅನುಭವವನ್ನು ಪಡೆದಿದ್ದಾರೆ. ಹೀಗಾಗಿ ಜ್ಯೋತಿಬಾ ಸ್ಪರ್ಧೆಗೆ ಕ್ಷೇತ್ರದ ಬಿಜೆಪಿಯ 2 ಜಿಪಂ ಸದಸ್ಯರು, 5 ತಾಪಂ ಸದಸ್ಯರು, ಹಲವು ಗ್ರಾಪಂ ಅಧ್ಯಕ್ಷರು, ಸದಸ್ಯರು, ಎಪಿಎಂಸಿ ಸದಸ್ಯರು ಮತ್ತು ಪಕ್ಷದ ಹಳೆಯ ಕಾರ್ಯಕರ್ತರು, ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಅವರ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಅನುಕಂಪದ ಅಲೆ ನಿರ್ಮಾಣಗೊಂಡು ಪಕ್ಷ ಸುಲಭವಾಗಿ ಗೆಲ್ಲಲು ಅನುಕೂಲವಾಗಲಿದೆ. ಆದ್ದರಿಂದ ಅವರಿಗೆ ಟಿಕೆಟ್‌ ನೀಡಬೇಕು ಎಂದು ಪ್ರತಿಪಾದಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಪಂ ಸದಸ್ಯ ಜೀತೆಂದ್ರ ಮಾದಾರ ಮಾತನಾಡಿ, ಪಕ್ಷದ ತಾಲೂಕುಮಟ್ಟದ ಬಹುತೇಕ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ವಿವಿಧ ಮೋರ್ಚಾ ಮುಖಂಡರು ದಿ.ರೇಮಾಣಿ ಅವರ ಪುತ್ರ ಜ್ಯೋತಿಬಾ ಅವರಿಗೆ ಪಕ್ಷದಿಂದ ಟಿಕೆಟ್‌ ನೀಡುವಂತೆ ಪಕ್ಷದ ವರಿಷ್ಠರನ್ನು ಕೋರಿದ್ದಾರೆ. ಪಕ್ಷದ ಹೈಕಮಾಂಡ್‌ ಅವರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್‌ ನೀಡಿದರೂ ಪಕ್ಷದ ಆದೇಶವನ್ನು ಬೆಂಬಲಿಸಿ ಕೆಲಸ ಮಾಡುವುದಾಗಿ ಹೇಳಿದರು.
ಸಭೆಯನ್ನುದ್ದೇಶಿಸಿ ಪಕ್ಷದ ಮುಖಂಡರಾದ ಸಯ್ಯಾಜಿ ಪಾಟೀಲ, ರವಿ ಬನೋಶಿ, ಬಸವರಾಜ ಬೇಕಣಿ, ಪರಶುರಾಮ ಚೌಗುಲೆ, ರಾಜಶ್ರೀ ದೇಸಾಯಿ, ಮಹಾಬಳೇಶ್ವರ ಚವಲಗಿ, ಹಣಮಂತ ಪಾಟೀಲ ಮತ್ತಿತರರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಸಂಜಯ ಕಂಚಿ, ಸಂತೋಷ ಹಡಪದ, ಶೀತಲ ಬಂಬಾಡಿ, ಸುರೇಶ ಮ್ಯಾಗೇರಿ, ಮಾರುತಿ ಟಕ್ಕೇಕರ ಮತ್ತಿತರರು ಇದ್ದರು.

loading...