ಯಕ್ಷಗಾನ ತಾಳಮದ್ದಳೆ ಯುವಕರನ್ನು ಆಕರ್ಷಿಸುತ್ತಿದೆ: ಹೆಗಡೆ

0
21
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಯಕ್ಷಗಾನ ತಾಳಮದ್ದಳೆ ಇಂದು ಯುವಕರನ್ನು ಆಕರ್ಷಿಸುತ್ತಿದೆ. ಅದರೊಳಗಿನ ಸಂವಾದ, ಚಿಂತನೆಗಳು ಸಮಾಜದ ಮೇಲೆ ಬಹು ಪರಿಣಾಮವನ್ನುಂಟುಮಾಡುತ್ತದೆ. ಈ ದೃಷ್ಟಿಯಿಂದ ಇಲ್ಲಿ ನೂತನವಾಗಿ ರಚನೆಗೊಂಡ ತಾಳಮದ್ದಲೆ ಒಕ್ಕೂಟ ಯುವ ಜನಾಂಗಕ್ಕೆ ಸ್ಪೂರ್ತಿ ನೀಡಬಲ್ಲುದಾಗಿದೆ. ಎಂದು ಯಕ್ಷಗಾನ ಅರ್ಥದಾರಿ ಎಂ.ಎನ್.ಹೆಗಡೆ ಹಳವಳ್ಳಿ ಹೇಳಿದರು.
ಅವರು, ತಾಲೂಕಿನ ಕ್ಷೇತ್ರ ಕವಡಿಕೆರೆಯ ಕೌಡಮ್ಮ ದೇವಸ್ಥಾನದಲ್ಲಿ ಗುರುವಾರ “ವೈಖರೀ ಯಕ್ಷಗಾನ ತಾಳಮದ್ದಲೆ ಬಳಗ”ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿಂದಿನ ಕಾಲದ ಗೃಹಸ್ಥರನೇಕರು ತಮ್ಮ ಮನೆಯ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ತಾಳಮದ್ದಲೆಯನ್ನು ಏರ್ಪಡಿಸುವ ಸಂಪ್ರದಾಯವಿಟ್ಟುಕೊಂಡಿದ್ದರು. ಕಾಲ ಬದಲಾದಂತೆ ಅಂತಹ ಸಂಪ್ರದಾಯ ಕಡಿಮೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಪೀಳಿಗೆಯ ಅನೇಕಯುವಕರು ಅರ್ಥಧಾರಿಗಳಾಗಿ ಹೊರಹೊಮ್ಮುತ್ತಿದ್ದಾರೆ.

ಯಕ್ಷಗಾನ ಅರ್ಥದಾರಿ ಜಬ್ಬಾರ ಸುಮೋ ಸಂಪಾಜೆ ಮಾತನಾಡಿ, ಇಂದು ಸಂಗೀತ, ಸಾಹಿತ್ಯ, ಯಕ್ಷಗಾನ ಸೇರಿದಂತೆ ಎಲ್ಲ ಕಲಾ ಕ್ಷೇತ್ರಗಳಲ್ಲೂ ಪ್ರತಿಭಾವಂತರನ್ನು ಹತ್ತಿಕ್ಕುತ್ತಿರುವ ಕಾರಣದಿಂದಾಗಿಯೇ ಅನೇಕ ಪ್ರತಿಭಾವಂತ ಕಲಾವಿದರು ಕಮರಿ ಹೋಗುತ್ತಿದ್ದಾರೆ. ಇಂತಹ ಸಂಘಟನೆಯ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಅವರ ಸಾಧನೆ ಉತ್ತುಂಗಕ್ಕೇರಲು ಅವಕಾಶ ದೊರೆತಂತಾಗಿದೆ. ಹಿರಿಯರಾದ ನಾವು ಯುವಕರಿಗೆ ಸದಾ ಮಾರ್ಗದರ್ಶನ ನೀಡಬೇಕು. ಗ್ರಾಮಾಂತರ ಪ್ರದೇಶದ ಮನೆ, ದೇವಾಲಯ, ಸಹಕಾರಿ ಸಂಘಗಳಲ್ಲಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ತಾಳಮದ್ದಲೆಗೆ ಅವಕಾಶ ನೀಡುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಊರಿನ ಗಣ್ಯರಾದ ಕೃಷ್ಣ ಭಟ್ಟ ಕವಡಿಕೆರೆ, ನಾರಾಯಣ ಭಟ್ಟ ಕವಡಿಕೆರೆ, ವಿ.ಶಿವರಾಮ ಭಾಗ್ವತ್, ರವಿಶಂಕರ್ ದೊಡ್ನಳ್ಳಿ, ಗಣೇಶ ಸುಂಕಸಾಳ, ಆದಿತ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ವಿ.ನರಸಿಂಹ ಭಟ್ಟ ಸ್ವಾಗತಿಸಿ, ನಿರ್ವಹಿಸಿದರು. ಸಂಘಟಕ ನಾಗರಾಜ ಭಟ್ಟ ಪ್ರಾಸ್ತಾವಿಕ ಮಾತನಾಡಿದರು.

loading...