ಯಡಿಯೂರಪ್ಪ ನನ್ನ ಗಾಡ್‍ಫಾದರ್ : ಪದ್ಮನಾಭ ಪ್ರಸನ್ನಕುಮಾರ

0
30
loading...

ವಿಜಯಪುರ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿ.ಡಿ. ಬಿಡುಗಡೆ ಮಾಡುವುದಾಗಿ ಹೇಳಿದ್ದ ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ ಈಗ ಯಡಿಯೂರಪ್ಪನವರೇ ಗಾಡ್ ಫಾದರ್ ಎಂದು ಹೇಳಿಕೆ ನೀಡಿದ್ದಾರೆ.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನನ್ನ ಗುರುಗಳು, ನನ್ನ ಗಾಡ್‍ಫಾದರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜ್ಯದಲ್ಲಿ ನಾನು ಗುರುತಿಸಿಕೊಳ್ಳಬೇಕಾದರೆ ಅವರೇ ಕಾರಣ, ಅವರು ಕೊಟ್ಟಿರುವ ಭಿಕ್ಷೆಯೇ ಕಾರಣ. ಅವರ ಉಪಕಾರ ಯಾವತ್ತಿಗೂ ಮರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿ.ಡಿ. ಬಿಡುಗಡೆಯ ಬಗ್ಗೆ ತೂರಿಬಂದ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಚುನಾವಣೆ ಇದೆ, ನೀತಿ ಸಂಹಿತೆ ಜಾರಿಯಲ್ಲಿದೆ. ಹಲವಾರು ನಿಬಂಧನೆಗಳಿವೆ, ಹೀಗಾಗಿ ನಾನು ಈ ವಿಷಯ ಮಾತನಾಡಲಾರೆ ಎಂದಷ್ಟೇ ಉತ್ತರಿಸಿದರು.
ಹಣಕ್ಕಾಗಿ ಟಿಕೇಟ್ ಮಾರಾಟ ಮಾಡಿದ ಕರಂದ್ಲಾಜೆ: ಆದರೆ ಶೋಭಾ ಕರಂದ್ಲಾಜೆ ಹಾಗೂ ಬಿ.ಎಸ್.ವೈ ಪುತ್ರರಾಗಿರುವ ಬಿ.ವೈ. ರಾಘವೇಂದ್ರ ಕೆಲವೆಡೆ ಹಣಕ್ಕಾಗಿ ಟಿಕೇಟ್ ಮಾಡಿದರು. ಹಣವಿದ್ದವರಿಗೆ ಅವಕಾಶ ನೀಡಿದರು. ಈ ಕಾರಣಕ್ಕಾಗಿ ಕೆಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

ಈ ಹಿಂದೆ ಕೆಜೆಪಿ ಕಳೆದ ಚುನಾವಣೆ ಸಂದರ್ಭದಲ್ಲಿ ಉತ್ತಮವಾದ ಸಾಧನೆ ಮಾಡಿತ್ತು. ಯಡಿಯೂರಪ್ಪನವರಿಗೂ ಈ ಸ್ಟ್ರ್ಯಾಟರ್ಜಿ ಪ್ಲ್ಯಾನ್ ಮಾಡಿಕೊಟ್ಟಿದ್ದು ನಾನೇ, ಆ ಕಾರಣದಿಂಧಾಗಿಯೇ ಹಲವೆಡೆ ಕೆಜೆಪಿ ಜಯಭೇರಿ ಸಾಧಿಸುವ ಜೊತೆಗೆ ಅನೇಕ ಕ್ಷೇತ್ರಗಳಲ್ಲಿ 2 ನೇ ಸ್ಥಾನ ಪಡೆದುಕೊಂಡಿತು.
224 ಕ್ಷೇತ್ರಗಳಲ್ಲಿ ಸ್ಪರ್ಧೆ: ಪ್ರಸ್ತುತ 224 ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. 30 ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಮುಂದೆ ಕಿಂಗಮೇಕರ್ ನಾವೇ ಆಗಲಿದ್ದೇವೆ ಎಂದು ಭವಿಷ್ಯ ನುಡಿದರು.

ವಿಜಯಪುರ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ, ಬಬಲೇಶ್ವರ ಮತಕ್ಷೇತ್ರದಿಂದ ಬಸವರಾಜ ಕಾತ್ರಾಳ ಹಾಗೂ ನಾಗಠಾಣ ಮೀಸಲು ಮತಕ್ಷೇತ್ರದ ಭಾರತಿ ಖಾಲೇಬಾಗ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದರು.
ಕುಮಾರ ಹಂಪಿಹೊಳಿ, ಪ್ರಕಾಶಬಾಬು, ಅಶೋಕ ತಿಳಗೂಳಕರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...