ಯುವ ಮತದಾರರ ಮೂಲಕ ಮತಜಾಗೃತಿಗೆ ಹೊಸ ತಂತ್ರ

0
27
loading...

ಮೌಲಾಹುಸೇನ ಬುಲ್ಡಿಯಾರ್

ಕನ್ನಡಮ್ಮ ಸುದ್ದಿ-ಕೊಪ್ಪಳ : ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಪ್ರಮಾಣ ದಾಖಲಿಸುವಂತಾಗಲು ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿ ಸಾಮಾಜಿಕ ಜಾಲತಾಣದ ಸದುಪಯೋಗ ಪಡೆಯಲು ಮುಂದಾಗಿದ್ದು, ಓಟರ್‍ಗ್ರಾಮ್ ಎನ್ನುವ ಹೆಸರಿನಲ್ಲಿ ಸೆಲ್ಫಿ ಫ್ರೇಂ ಅನ್ನು ಬಳಸಿಕೊಂಡು, ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ಕಸರತ್ತು ಪ್ರಾರಂಭಿಸಿದೆ.
ಪ್ರತಿಯೊಬ್ಬರ ಮನೆಯಲ್ಲಿ, ಪ್ರತಿಯೊಬ್ಬ ಯುವ ಜನರ ಕೈಯಲ್ಲೂ ಸ್ಮಾರ್ಟ್ ಫೋನ್‍ಗಳು ರಾರಾಜಿಸುತ್ತಿವೆ. ಯುವಪಡೆ, ತಮ್ಮ ಕೈಯಲ್ಲಿನ ಸ್ಮಾರ್ಟ್ ಫೋನ್‍ಗಳಲ್ಲಿ ವಾಟ್ಸಾಪ್, ಫೇಸ್‍ಬುಕ್, ಬ್ಲಾಗ್, ಹೀಗೆ ಹಲವು ಬಗೆಯ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸ್ನೇಹಿತರೊಂದಿಗೆ ಪೈಪೋಟಿಗೆ ಬಿದ್ದವರಂತೆ ಚಿಟ್‍ಚಾಟ್ ನಡೆಸುವುದು, ಫೋಟೋ, ಸಂದೇಶಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ವೈವಿಧ್ಯಮಯ ಫೋಟೋಗಳನ್ನು ಸ್ನೇಹಿತರುಗಳೊಂದಿಗೆ ಹಾಗೂ ಬಂಧುಗಳಿಗೆ ವಿನಿಮಯ ಮಾಡಿಕೊಳ್ಳಲು ‘ಇನ್ಸ್ಟಾಗ್ರಾಂ’ ಎಂಬ ಸಾಮಾಜಿಕ ಜಾಲತಾಣವಿದೆ. ಇದರ ಜೊತೆಗೆ ತಮಗೆ ಬೇಕೆನಿಸುವ ಫೋಟೋಗಳನ್ನು ವ್ಯಾಟ್ಸಾಪ್, ಫೇಸ್‍ಬುಕ್‍ನಲ್ಲಿ ಡಿಪಿ ಆಗಿ ಹಾಕಿಕೊಂಡು, ಖುಷಿ ಪಡುತ್ತಾರೆ. ಹೀಗೆ ಯುವಜನರಲ್ಲಿನ ಸಾಮಾಜಿಕ ಜಾಲತಾಣಗಳ ಬ್ಯುಸಿ ಚಟುವಟಿಕೆಯನ್ನು ಮತದಾರರ ಜಾಗೃತಿಗೆ ಸದುಪಯೋಗಪಡಿಸಿಕೊಳ್ಳಲು ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿ ಮುಂದಾಗಿದೆ.
ಓಟರ್‍ಗ್ರಾಮ್ ಎನ್ನುವ ಹೆಸರಿನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅನುವಾಗುವ ರೀತಿಯಲ್ಲಿ ಫ್ರೇಂ ಫಲಕ ತಯಾರಿಸಲಾಗಿದ್ದು, ಈ ಫಲಕದಲ್ಲಿ ಮತದಾರರ ಜಾಗೃತಿಗಾಗಿ ನೇಮಕಗೊಂಡಿರುವ ಯೂತ್ ಐಕಾನ್ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಫೋಟೋ, ಹಾಗೂ ಕೊಪ್ಪಳ ಜಿಲ್ಲಾ ಸ್ವೀಪ್ ಕಾರ್ಯಕ್ರಮದ ಲಾಂಛನವಾಗಿರುವ ಓಟರ್‍ಕುಮಾರ ಲೋಗೋ, ಹಾಗೂ ಕರ್ನಾಟಕ ಮತ್ತು ಭಾರತ ಚುನಾವಣಾ ಆಯೋಗದ ಚಿಹ್ನೆಗಳನ್ನು ಬಳಸಲಾಗಿದೆ. ಅಲ್ಲದೆ ಮೇ. 12 ರಂದು ಚುನಾವಣೆ ನಿಮಿತ್ಯ ತಪ್ಪದೆ ನಾನು, ನಮ್ಮ ಕುಟುಂಬ ಹಾಗೂ ಸ್ನೇಹಿತರೊಡಗೂಡಿ, ಮತ ಚಲಾಯಿಸುತ್ತೇನೆ ಎಂಬ ಹೇಳಿಕೆ ಇದೆ. ಫ್ರೇಂನ ಫಲಕದ ಮಧ್ಯಭಾಗದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಲು ಅನುವಾಗುವಂತೆ ಸ್ಥಳದ ಅವಕಾಶ ಕಲ್ಪಿಸಲಾಗಿದೆ. ಫ್ರೇಂನಲ್ಲಿ ಖಾಲಿ ಇರುವ ಸ್ಥಳದಲ್ಲಿ ನೀವು ನಿಂತು ತಮ್ಮ ಫೋಟೋ ತೆಗೆಸಿಕೊಂಡರೆ ಸಾಕು, ಆ ಫೋಟೋ, ತಮ್ಮ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಡಿಪಿ ತಯಾರಾದಂತೆ.

ಈ ರೀತಿ ಎಲ್ಲರೂ ಈ ಫಲಕದ ಮಧ್ಯೆ ನಿಂತು ಫೋಟೋ ತೆಗೆಯಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋ ಗಳನ್ನು ಶೇರ್ ಮಾಡುತ್ತಾ ಹೋದಲ್ಲಿ, ಎಲ್ಲ ಯುವಜನರಿಗೂ ಮತದಾನದ ಜಾಗೃತಿ ತಲುಪಬಹುದು ಎಂಬುದು ಜಿಲ್ಲಾ ಸ್ವೀಪ್ ಸಮಿತಿಯ ಆಶಯವಾಗಿದೆ. ಹಾಗಾದರೆ, ಇನ್ನೇಕೆ ತಡ, ಓಟರ್‍ಗ್ರಾಂ ಫ್ರೇಂ ನಲ್ಲಿ ನಿಂತು, ಫೋಟೋ ಕ್ಲಿಕ್ಕಿಸಿಕೊಳ್ಳಿ, ತಮ್ಮ ಫೇಸ್‍ಬುಕ್, ಇನ್ಸ್ಟಾಗ್ರಾಂ, ವ್ಯಾಟ್ಸಪ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳಿ. 18 ವರ್ಷ ವಯಸ್ಸು ಪೂರ್ಣಗೊಂಡ ಯುವಜನರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅರ್ಹರು. ಏ. 14 ರವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. ಮೇ. 12 ರಂದು ಮತದಾನ ನಡೆಯಲಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರನ್ನು ಮತಗಟ್ಟೆಗಳತ್ತ ಸೆಳೆಯಲು ಹಲವು ಬಗೆಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸ್ವೀಪ್ ಕಾರ್ಯಕ್ರಮಗಳಡಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು ಎನ್ನುತ್ತಾರೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು.

loading...