ರಸ್ತೆಯನ್ನು ಶೀಘ್ರವಾಗಿ ನಿರ್ಮಿಸಿಕೊಡಬೇಕೆಂದು ಆಗ್ರಹ

0
17
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ದೀವಗಿಯಲ್ಲಿ ಚತುಷ್ಪಥ ನಿರ್ಮಾಣ ಕಾಮಗಾರಿ ಮಾಡುವಾಗ ದೀವಗಿ ನವಗ್ರಾಮದ ಮೂಲಕ ಹೆದ್ದಾರಿಗೆ ಕೂಡುವ ರಸ್ತೆಯನ್ನು ಅಗೆದು ಒಂದು ವರ್ಷ ಕಳೆದರೂ ಈ ವರೆಗೂ ಐಆರ್‍ಬಿಯವರು ದಾರಿ ನಿರ್ಮಾಣ ಮಾಡದೇ ಇರುವುದರಿಂದ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆ ಉಂಟಾಗಿದೆ.

ಇಲ್ಲಿನ ರಸ್ತೆಯಿಂದ ದಿನನಿತ್ಯ ನೂರಾರು ಜನರು ಓಡಾಡುತ್ತಾರೆ. ಐಆರ್‍ಬಿಯವರು ರಸ್ತೆಯನ್ನು ಅಗೆದಿರುವುದರಿಂದ ಬಹಳಷ್ಟು ಮಕ್ಕಳು, ಮುದುಕರು ಜಾರಿಬಿದ್ದು ಗಾಯಗೊಂಡಿದ್ದಾರೆ. ಅಂಗನವಾಡಿಯಿಂದ ಹಿಡಿದು ಹೈಸ್ಕೂಲ್, ಕಾಲೇಜಿಗೆ ಹೋಗುವವರೆಗಿನ ಮಕ್ಕಳು ಸೇರಿದಂತೆ ರಸ್ತೆಯಾಚೆಯಿರುವ ಗ್ರಾಮ ಪಂಚಾಯತ, ಪಡಿತರ ವ್ಯವಸ್ಥೆ, ದೇವಸ್ಥಾನಗಳಿಗಿತ್ಯಾದಿ ಓಡಾಡುವ ನವಗ್ರಾಮ, ಮಣಕೋಣ, ಶಿಳ್ಳೆ, ಬೆಳ್ಳೆ, ಹೊಂಡದಕ್ಕಲ, ಅಂತ್ರವಳ್ಳಿ ಗ್ರಾಮಗಳ ಸಾರ್ವಜನಿಕರು, ಕೂಲಿಕಾರರು, ಇದೇ ದಾರಿಯಿಂದ ತಿರುಗಬೇಕಾಗಿದೆ. ಹಲವು ಬಾರಿ ಐಆರ್‍ಬಿಗೆ ಸಂಬಂಧಪಟ್ಟ ಪಿಎಂ ಜೊತೆಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ, ಸ್ಥಳಕ್ಕೆ ಬರುತ್ತೇವೆ ಅಂತ ಹೇಳಿದವರು ಮುಖವನ್ನೇ ಕಾಣಿಸುತ್ತಿಲ್ಲ. ಇದೀಗ ಮಳೆಗಾಲ ಪುನಃ ಪ್ರಾರಂಭವಾಗುತ್ತಿರುವುದರಿಂದ ಪುನಃ ಆತಂಕ ಸೃಷ್ಟಿಯಾಗುವುದು ನಿಶ್ಚಿತವಾಗಿದೆ. ಅಲ್ಲದೇ ನವಗ್ರಾಮದ ಸಮೀಪದ ಭಾಗದಲ್ಲಿ ಕಾಮಗಾರಿ ಮುಗಿಸಲು ಯಾರದೇ ತಕರಾರಿಲ್ಲದಿದ್ದರೂ ಕಾಮಗಾರಿ ಕುಂಟುತ್ತಾ ಸಾಗಿಸುವ ಜೊತೆಗೆ ಬೇಕಾಬಿಟ್ಟಿಯಾಗಿ ಐಆರ್‍ಬಿ ಕಾಮಗಾರಿ ನಡೆಯುತ್ತಿರುವುದು ಸಾರ್ವಜನಿಕರಿಗೆ ತೀರಾ ಅಸಮಾಧಾನ ತಂದಿದೆ.
ಹಾಗಾಗಿ ಮಳೆಗಾಲದ ಮೊದಲೇ ಇಲ್ಲಿನ ರಸ್ತೆ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಒಂದು ವಾರದೊಳಗೆ ಈ ಕಾಮಗಾರಿಗೆ ಚಾಲನೆ ನೀಡದಿದ್ದಲ್ಲಿ ಸಾರ್ವಜನಿಕರೆಲ್ಲರು ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಆರ್ ಕೆ ಅಂಬಿಗ ತಿಳಿಸಿದ್ದಾರೆ.

loading...