ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

0
25
loading...

ಮುಂಡರಗಿ: ರೈತರ ಪಂಪ್‌ಸೆಟ್‌ಗಳಿಗೆ ನಿಯಮಿತವಾಗಿ ವಿದ್ಯುತ್‌ ಪೂರೈಸಬೇಕು ಎಂದು ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಶುಕ್ರವಾರ ಸಂಜೆ ಹೆಸ್ಕಾಂ ಕಚೇರಿ ಮುಂದಿರುವ ರಾಜ್ಯ ಹೆದ್ದಾರಿಯನ್ನು ಬಂದ್‌ ಮಾಡಿ ದಿಢೀರ್‌ ಪ್ರತಿಭಟನೆ ನಡೆಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವೀರನಗೌಡ ಪಾಟೀಲ ಮಾತನಾಡಿ, ತುಂಗಭದ್ರಾ ನದಿಯಲ್ಲಿ ನೀರು ಹರಿಯುತ್ತಿದ್ದು, ಹೆಸ್ಕಾಂನವರು ವಿದ್ಯುತ್‌ ಪೂರೈಕೆಯನ್ನು ಸ್ಥಗಿತಗೊಳಿಸುರುವುದರಿಂದ ರೈತರು ಜಮೀನಿಗೆ ನೀರು ಹಾಯಿಸಿಕೊಳ್ಳದಂತಾಗಿದೆ ಎಂದು ದೂರಿದರು.
ರೈತರ ಪಂಪಸೆಟ್‌ಗಳಿಗೆ ನಿಯಮಿತವಾಗಿ 7 ತಾಸು ತ್ರಿಪೇಸ್‌ ವಿದ್ಯುತ್‌ ಪೂರೈಸಬೇಕಾಗಿತ್ತು. ಆದರೆ ಹೆಸ್ಕಾಂ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ಸಮರ್ಪಕವಾಗಿ ವಿದ್ಯುತ್‌ ಪೂರೈಸದೆ ಇರುವುದರಿಂದ ಬೆಳೆಗಳೆಲ್ಲ ನೀರುನಿಸುವುದಕ್ಕೆ ತೊಂದರೆಯಾಗುತ್ತದೆ. ಇದರಿಂದ ಬೆಳೆಗಳೇಲ್ಲ ಒಣಗುವ ಹಂತ ತಲುಪಿವೆ ಎಂದರು. ಹೆಸ್ಕಾಂ ಇಲಾಖೆಯ ಎಇಇ ಎಂ.ಬಿ.ಗೌರೋಜಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಚರ್ಚೆ ನಡೆಸಿದರು.
ಸದ್ಯ ಹಗಲು ಕೊಡುವ 3ತಾಸು ತ್ರಿಪೇಸ್‌ ಬದಲು ರಾತ್ರಿ 11 ರಿಂದ ಬೆಳಗ್ಗೆ 6ರವರೆಗೆ ನಿರಂತರ 7 ತಾಸು ತ್ರಿಪೇಸ್‌ ವಿದ್ಯುತ್‌ ಪೂರೈಸಲಾಗುವುದು ಎಂದು ತಿಳಿಸಿದರು. ಇದಕ್ಕೆ ಒಪ್ಪಿದ ರೈತರು ಒಂದು ವಾರದವರೆಗೆ ರಾತ್ರಿ 7ತಾಸು ವಿದ್ಯುತ್‌ ನೀಡಿ ನಂತರ ಮತ್ತೆ ಹಗಲು 3 ತಾಸು, ರಾತ್ರಿ 4ತಾಸು ತ್ರಿಪೇಸ್‌ ವಿದ್ಯುತ್‌ ಪೂರೈಸಬೇಕು ಎಂದು ಮನವಿ ಮಾಡಿದರು.
ರೈತರ ಬೇಡಿಕೆಗೆ ಎಇಇ ಗೌರೋಜಿ ಸ್ಪಂದಿಸಿದರು. ನಾಗರಾಜ ಶೀರನಳ್ಳಿ, ಬಸಪ್ಪ ಮುದ್ದಿ, ಚಾಂದಸಾಬ್‌ ಕೊಂಬಳಿ, ರಾಜಾಬಕ್ಷೀ ಬಡನಾಯ್ಕ, ಈಶಪ್ಪ ಹೊಸೂರ, ನಿಂಗಪ್ಪ ಚೌಡಕಿ, ಇಮಾಮ್‌ಸಾಬ್‌ ಮಾ:ನಾಯ್ಕ, ಭೀಮಣ್ಣ ಕ್ಯಾತಣ್ಣವರ, ಚನ್ನಬಸಪ್ಪ ಸೊಂದಗಿ, ಚನ್ನಯ್ಯ ಹಿರೇಮಠ, ಮಾರುತಿ ಗಾಂಜಿ, ರಂಜಿತ್‌ ಮದ್ದಿಪಾಟೀಲ, ಬಸಪ್ಪ ಹುಲಿಕಟ್ಟಿ, ಇತರರು ಇದ್ದರು.

loading...