ವಿವಾದಾತ್ಮಕ ತೀರ್ಪನ್ನು ನೀಡಿದ್ದು ಸರಿಯಲ್ಲ

0
42
loading...

ಕನ್ನಡಮ್ಮ ಸುದ್ದಿ- ಧಾರವಾಡ: ಪ,ಜಾ, ಪ.ಪಂ ದೌಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಪೂರ್ಣ ಪೀಠ ಹಾಗೂ ಸಂವಿಧಾನ ಪೀಠಕ್ಕೆ ಮೇಲ್ಮನವಿ ಸಲ್ಲಿಸುವಂತೆ ಹಾಗೂ ಈ ಸಂಬಂಧ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದು ಸುಗ್ರೀವಾಜ್ಞೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಧಾರವಾಡ ಜಿಲ್ಲಾ ಸಮಿತಿಯವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌeರ್ನ್ಯ ತಡೆ ಕಾಯ್ದೆಯು ಶೋಷಿತ ವರ್ಗಗಳ ಜನರಿಗೆ ಸಾಮಾಜಿಕ ಸಮಾನತೆ ಹಾಗೂ ಭದ್ರತೆಯ ಭಾವನೆಯನ್ನು ಮೂಡಿಸಿತ್ತು, ಈ ವರ್ಗಗಳ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಅವರ ಸ್ವಾಭಿಮಾನ ರಕ್ಷಣೆಗಾಗಿ ಸಂವಿಧಾನದಲ್ಲಿ ಅಸ್ಪೃಶ್ಯತೆ ಆಚರಣೆಯನ್ನು ನಿಷೇದಿಸುವ ತೀರ್ಮಾನವನ್ನು ಸಂವಿಧಾನದ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸೇರಿದಂತೆ ಸಂವಿಧಾನ ರಚನಾಕಾರರು ಅಳವಡಿಸಿದ್ದಾರೆ ಎಂದು ಡಿಎಸ್‌ಎಸ್‌ ಹೇಳಿದೆ. ಈ ನಿಟ್ಟಿನಲ್ಲಿ ಆಗಿನ ಕೇಂದ್ರ ಸರ್ಕಾರ 1989 ರಲ್ಲಿ ವಿಶೇಷ ಕಾಯ್ದೆಯನ್ನು ರಚಿಸಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಜನರ ರಕ್ಷಣೆಗಾಗಿ ಹಾಗೂ ಸಾಮಾಜಿಕ ಸಮಾನತೆಗಾಗಿ ಇಂತಹ ಮಹತ್ಕಾರ್ಯವನ್ನು ಮಾಡಲಾಗಿತ್ತು, ಆದರೆ, ಪ್ರಸ್ತುತ ಸರ್ವೋಚ್ಛ ನ್ಯಾಯಾಲಯ ಈ ಕಾಯ್ದೆಗೆ ವ್ಯತಿರಿಕ್ತವಾಗಿ ಸರ್ಕಾರಿ ನೌಕರರನ್ನು ಈ ಕಾಯ್ದೆಯಡಿ ಮೊಕದ್ದಮೆ ದಾಖಲಾದರೂ ಅವರನ್ನು ಬಂಧಿಸುವ ಹಾಗಿಲ್ಲ ಮತ್ತು ತನಿಖಾಧಿಕಾರ ಮೊಕದ್ದಮೆ ದಾಖಲಾದ 7 ದಿನಗಳವರೆಗೆ ತನಿಖೆ ನಡೆಸಿ ತನಗೆ ಸರಿ ಅನಿಸಿದಲ್ಲಿ ಮಾತ್ರ ಬಂಧಿಸಬಹುದಾಗಿದೆ ಎಂಬ ವಿವಾದಾತ್ಮಕ ತೀರ್ಪನ್ನು ನೀಡಿದ್ದು ಸರಿಯಲ್ಲವೆಂದು ಡಿಎಸ್‌ಎಸ್‌ ಹೇಳಿದೆ. ಈ ವಿಚಾರವಾಗಿ ಉತ್ತರ ಭಾರತದ ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ನಡೆದ ಪ್ರತಿಭಟನೆಯ ವೇಳೆ ಒಂಬತ್ತು ಜನರು ಮೃತ ಪಟ್ಟು ನೂರಾರು ಜನ ಗಾಯಗೊಂಡಿದ್ದಾರೆ, ಈ ಘಟನೆಯ ತನಿಖೆಗಾಗಿ ಕೇಂದ್ರ ಸರ್ಕಾರ ನ್ಯಾಯಾಂಗ ತನಿಖೆಯನ್ನು ನಡೆಸಿ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಕಾಯ್ದೆಯ ಕುರಿತಂತೆ ವಿಶೇಷ ಅಧಿವೇಶನವನ್ನು ಕರೆಯುವಂತೆ ಹಾಗೂ ಈ ಸಂಬಂಧ ಸುಗ್ರೀವಾಜ್ಞೆಯನ್ನು ಹೊರಡಿಸುವಂತೆ ಮತ್ತು ಎಲ್ಲಾ ಸಂಸದರು ಒಗ್ಗಟ್ಟು ಪ್ರದರ್ಶಿಸಿ, ಈ ಕಾಯ್ದೆಯನ್ನು ಬಲಪಡಿಸುವಂತೆ ನಿರ್ಧಾರವನ್ನು ಕೈಗೊಳ್ಳುವಂತೆ ಸಮಿತಿ ಆಗ್ರಹಿಸಿದೆ.

loading...