ಶೇಂಗಾ ಬೆಳೆದು ಸಂಕಷ್ಟದಲ್ಲಿ ರೈತರು

0
13
loading...

ಕನ್ನಡಮ್ಮ ಸುದ್ದಿ-ಕುಮಟಾ: ತಾಲೂಕಿನ ರೈತರು ಈ ಭಾರಿ ಬೆಳೆಸಿದ ಶೇಂಗಾ ಬೆಲೆಗೆ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ದೊರೆಯದ ಕಾರಣ ರೈತರು ಸಾವಿರಾರು ರೂ ನಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷ ಕ್ವಿಂಟಲ್‍ಗೆ 6800 ರೂ ಇದ್ದ ಶೇಂಗಾ ಬೆಲೆ ಈ ವರ್ಷ ಕೇವಲ 4ರಿಂದ 4.5 ಸಾವಿರ ರೂ ದರವಿದೆ. ಇಳುವರಿಯೂ ಚೆನ್ನಾಗಿಲ್ಲದೆ, ದರವೂ ಕಡಿಮೆಯಾಗಿದ್ದರಿಂದ ರೈತರ ಸ್ಥಿತಿ ಡೊಲಾಯಮಾನವಾಗಿದೆ.
ಕುಮಟಾ ಮತ್ತು ಮಿರ್ಜಾನ್ ಹೋಬಳಿಯಲ್ಲಿ ಶೇಂಗಾ ಕೃಷಿ ಕಳೆದ ವರ್ಷಕ್ಕಿಂತ ಈ ವರ್ಷ ಶೇ.70ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಕುಮಟಾ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 200 ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಶೇಂಗಾ ಕೃಷಿ ಈ ವರ್ಷ ಕೇವಲ 52 ಹೆಕ್ಟರ್‍ಗೆ ಇಳಿದಿದೆ. ಇನ್ನು ಮಿರ್ಜಾನ್ ಹೋಬಳಿಯಲ್ಲಿ 16 ಹೆಕ್ಟರ್ ಇದ್ದದ್ದು 8 ಹೆಕ್ಟರ್‍ಗೆ ಕುಸಿತ ಕಂಡಿದೆ. ಹಾಗಾಗಿ ಈ ವರ್ಷ ಕೃಷಿ ಇಲಾಖೆ ಹೊಂದಿದ್ದ 712 ಹೆಕ್ಟರ್‍ನ ಗುರಿಯಲ್ಲಿ 471 ಹೆಕ್ಟರ್‍ನಷ್ಟು ಸಾಧನೆಯಲ್ಲಿ ತೃಪ್ತಿ ಪಡುವಂತಾಗಿದೆ.

ಪ್ರತಿ ಎಕರೆಗೆ 8ರಿಂದ 10 ಕ್ವಿಂಟಲ್ ಶೇಂಗಾ ಬೆಳೆಯುತ್ತಿದ್ದ ರೈತರು ಈ ಬಾರಿ ಕೇವಲ 4ರಿಂದ 6 ಕ್ವಿಂಟಲ್ ಶೇಂಗಾ ಇಳುವರಿ ಬಂದಿದೆ. ಅದರಲ್ಲೂ ಶೇ.30ರಿಂದ 40ರಷ್ಟು ಜೊಳ್ಳು ಬೀಜವಾಗಿದ್ದರಿಂದ ಹಲವು ಆಹಾರ ಉತ್ಪನ್ನಗಳ ತಯಾರಿಕೆಗೆ ಅಯೋಗ್ಯವಾಗಿದೆ. ಇದರಿಂದ ರೈತ ಶೇಂಗಾ ಬೆಳೆಗಾಗಿ ಖರ್ಚು ಮಾಡಿದ ಶೇ.40 ರಷ್ಟು ಹಣವನ್ನು ಗಳಿಸಲಾಗದ ಸಂಕಷ್ಟ ಸ್ಥಿತಿಯನ್ನು ರೈತರು ಎದುರಿಸುವಂತಾಗಿದೆ. ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿದ್ದರಿಂದ ಮತ್ತು ವಾತಾವರಣದ ವೈಪರಿತ್ಯದಿಂದ ಈ ಬಾರಿಯ ಶೇಂಗಾ ಬೆಳೆ ಜೊಳ್ಳಾಗಿದ್ದು, ಕರಾವಳಿಯ ಬಹುತೇಕ ರೈತರು ನಷ್ಟ ಅನುಭವಿಸುವಂತಾಗಿದೆ.

loading...