ಸರಕಾರಿ ಪದವಿ ಕಾಲೇಜಿನಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಾಗಾರ

0
23
loading...

ಕನ್ನಡಮ್ಮ ಸುದ್ದಿ-ಕಾರವಾರ: ಭಾರತದ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸ್ವೀಪ್ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕಾಲೇಜು ವಿಧ್ಯಾರ್ಥಿಗಳಿಗೆ ಮತದಾನ ಜಾಗೃತಿ ಕುರಿತ ಕಾರ್ಯಾಗಾರವನ್ನು ಕಾರವಾರ ಸರಕಾರಿ ಪದವಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಾಗಾರದಲ್ಲಿ ಸ್ವೀಪ್ ಸಮಿತಿಯ ಸಂಚಾಲಕಿ ಲತಾ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಮತದಾನ ದಿನದಂದು 18 ವರ್ಷ ಮೇಲ್ಪಟ್ಟ ಎಲ್ಲರೂ ಮತ ಚಲಾಯಿಸುವುದರೊಂದಿಗೆ ತಮ್ಮ ಹತ್ತಿರದವರನ್ನು ಮತ ಚಲಾಯಿಸಲು ಪ್ರೇರೆಪಿಸುವಂತೆ ಮಾಡಬೇಕೆಂದು ಸಲಹೆ ನೀಡಿದರು.
ರಾಜ್ಯಶಾಸ್ತ್ರ ಪ್ರಾಧ್ಯಾಪಕ ವಿ.ಎಮ್ ಗಿರಿ ಅವರು ಚುನಾವಣೆ, ಮತದಾನದ ಮಹತ್ವ ಹಾಗೂ ಮತದಾನ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು ಎಂಬುದನ್ನು ವಿವರಿಸಿ, ಮತ ಚಲಾಯಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಚುನಾವಣೆಯ ಪೂರ್ವದಲ್ಲಿಯೇ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಪ್ರಾಣಿ ಶಾಸ್ತ್ರ ವಿಭಾಗದ ಉಪನ್ಯಾಸಕ ವಸಂತ ಕುಮಾರ ಅವರು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ಮತವನ್ನು ಹೇಗೆ ಚಲಾಯಿಸಬೇಕೆಂಬುದರ ಬಗ್ಗೆ ತಿಳಿಸಿ, ಎಲೆಕ್ಟ್ರಾನಿಕ್ ವೋಟಿಂಗ್ ಮಶೀನ್ (ಇ.ವಿ.ಎಮ್) ಮತ್ತು ವಿ.ವಿ. ಪ್ಯಾಟ್ ಮಶೀನಿನ ಬಗ್ಗೆ ವಿವರಣೆ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಸರಕಾರಿ ಪದವಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಕಲ್ಪನಾ ಕೇರವಡಿಕರ ವಹಿಸಿದರು. ಉಲ್ಲಾಸ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.

loading...