ಸರತಿಯಲ್ಲಿ ನಿಂತು ವೈದ್ಯಕೀಯ ತಪಾಸಣೆಗೊಳಗಾದ ನೌಕರರು

0
18
loading...

ಕನ್ನಡಮ್ಮ ಸುದ್ದಿ-ಕಾರವಾರ: ಇಂದು ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಜಿಲ್ಲೆಯ ವಿವಿದ ತಾಲೂಕುಗಳಿಂದ ಬಂದ ಬೇರೆ ಬೇರೆ ಇಲಾಖೆಯ ನೂರಾರು ಸರ್ಕಾರಿ ಸಿಬ್ಬಂದಿಗಳು ಸರತಿ ಸಾಲಿನಲ್ಲಿ ನಿಂತು ತಮ್ಮ ಆರೋಗ್ಯ ತಪಾಸಣೆಗೊಳಗಾದರು.

ಅನಾರೋಗ್ಯದ ನಿಮಿತ್ತ ಚುನಾವಣಾ ಕರ್ತವ್ಯದಿಂದ ವಿನಾಯ್ತಿ ಪಡೆಯುವ ಸರ್ಕಾರಿ ಸಿಬ್ಬಂದಿಗಳು ಕಡ್ಡಾಯವಾಗಿ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ತಪಾಸಣೆಗೊಳಗಾಗಬೇಕು ಎಂಬ ಜಿಲ್ಲಾಧಿಕಾರಿಗಳ ಆದೇಶ ನೀಡಿದ್ದರಿಂದ ವಿವಿಧೆಡೆಗಳಿಂದ ಬಂದ ನೌಕರರು ತಮ್ಮ ಆರೋಗ್ಯ ತಪಾಸಣೆಗೆ ಬಂದಿದ್ದರು.
ಜಿಲ್ಲಾಡಳಿತದ ಈ ವರ್ತನೆಯ ಬಗ್ಗೆ ಸರತಿ ಸಾಲಿನಲ್ಲಿ ನಿಂತಿದ್ದ ಕೆಲ ನೌಕರರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಡಳಿತದ ವರ್ತನೆ ಅಮಾನವೀಯ ಎಂದರು. ಹೆರಿಗೆ ರಜೆಯಲ್ಲಿರುವ ಹಾಗೂ ಆಪರೇಷನ್‍ಗೆ ಒಳಗಾದಂತ ಸಿಬ್ಬಂದಿಗಳಿಗೂ ಸಹ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ.  ಹೀಗಿರುವಾಗ ಈ ವೈದ್ಯಕೀಯ ದೃಢೀಕರಣಕ್ಕಾಗಿ ನಾವು ನೂರಾರು ಕೀ.ಮಿ ಪ್ರಯಾಣಿಸಿ ಇಲ್ಲಿ ಬಂದು ಈ ಸರ್ಟಿಫಿಕೇಟ್‍ಗಾಗಿ ಗಂಟೆಗಟ್ಟಲೇ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ತಂದುದಕ್ಕೆ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದರು. ಕೇವಲ ಹದಿನೈದು ದಿನಗಳ ಹಿಂದಷ್ಟೇ ಹೆರಿಗೆಯಾದ ಸಿಬ್ಬಂದಿಯೂ ಸಹ ನೂರಾರು ಕೀ.ಮಿ ದೂರದಿಂದ ಇಲ್ಲಿಗೆ ಬಂದು ವೈದ್ಯಕೀಯ ದೃಢೀಕರಣಕ್ಕೆ ಸರತಿಯಲ್ಲಿ ನಿಂತ ದೃಶ್ಯ ಮನಕಲಕುವಂತಿತ್ತು.

ಚುನಾವಣಾ ಕರ್ತವ್ಯದಿಂದ ವಿನಾಯ್ತಿ ಪಡೆಯಲು ಸರ್ಕಾರಿ ನೌಕರರು ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ನಡೆಸಿ ಸೂಕ್ತದಾಖಲೆಗಳನ್ನು ಒದಗಿಸಬೇಕು ಎಂದು ಚುನಾವಣಾ ಅಯೋಗ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಅದರಂತೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಅಷ್ಟೇ ಎಂದು ಕೆಲ ನೌಕರರು ಜಿಲ್ಲಾಡಳಿತದ ಆದೇಶವನ್ನು ಸಮರ್ಥಿಸಿಕೊಂಡರು.

loading...