ಸಾಮೂಹಿಕ ರಾಜೀನಾಮೆಗೆ ಕಾಂಗ್ರೆಸ್ ಕಾರ್ಯಕರ್ತರ ನಿರ್ಧಾರ: ಪ್ರಕಾಶ

0
74
loading...

ಕನ್ನಡಮ್ಮ ಸುದ್ದಿ-ಖಾನಾಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣಿ ಭೂತರಾಗಿದ್ದ ಡಾ.ಅಂಜಲಿ ನಿಂಬಾಳಕರ ಅವರಿಗೆ ಈ ಸಲದ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಲು ಮುಂದಾಗಿರುವ ಕಾಂಗ್ರೆಸ್ ಮುಖಂಡರ ಕ್ರಮವನ್ನು ಖಂಡಿಸಿರುವ ತಾಲೂಕಿನ 400ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿರುವುದಾಗಿ ಪಕ್ಷದ ಮುಖಂಡ ಪ್ರಕಾಶ ಬೈಲೂರಕರ ಹೇಳಿದರು.
ಪಟ್ಟಣದ ಶುಭಂ ಗಾರ್ಡನ್ ಸಭಾಗೃಹದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕಿನ ಆಯ್ದ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಉಮೇದುವಾರಿಕೆ ನೀಡುವಾಗ ಪಕ್ಷದ ಮುಖಂಡರು ಸ್ಥಳೀಯ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿಲ್ಲ. ಸ್ಥಳೀಯವಾದ ಅಭ್ಯರ್ಥಿಗೆ ಅವಕಾಶ ನೀಡದೇ ಹೊರಗಿನವರಿಗೆ ಮಣೆ ಹಾಕಲಾಗುತ್ತಿದೆ. ಹೀಗಾಗಿ ಪಕ್ಷದ ಎಲ್ಲ ಕಾರ್ಯಕರ್ತರೂ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧಾರ ಮಾಡಿರುವುದಾಗಿ ಅವರು ಸ್ಪಷ್ಟಪಡಿಸಿದರು.

ಮೋದೆಕೊಪ್ಪ ಗ್ರಾಮದ ಕಾಂಗ್ರೆಸ್ ಮುಖಂಡ ಗೌತಮ ಪಾಟೀಲ ಮಾತನಾಡಿ, ಇದೇ 10ನೇ ತಾರೀಕಿನ ಒಳಗೆ ಪಕ್ಷದ ಮುಖಂಡರು ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವುದಾಗಿ ಘೋಷಿಸಬೇಕು, ಇದಕ್ಕೆ ತಪ್ಪಿದಲ್ಲಿ ಕಾಂಗ್ರೆಸ್ ತೊರೆದು ಕಣದಲ್ಲಿರುವ ಇತರೆ ಪಕ್ಷದ ಸ್ಥಳೀಯ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಹೇಳಿದರು. ಸಭೆಯಲ್ಲಿ ನಿರೂಪಾದಿ ಕಾಂಬಳೆ, ರಫೀಕ ಖಾನಾಪುರಿ, ಪ್ರಕಾಶ ಪಾಟೀಲ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

loading...