ಸಿದ್ದಗೊಂಡ ಹು-ಧಾ ಸೆಂಟ್ರಲ್ ಚುನಾವಣಾ ಅಖಾಡ

0
48
loading...

ಹುಬ್ಬಳಿ: ಕರ್ನಾಟಕದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಜಿಲ್ಲೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಹು-ಧಾ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ಡಾ. ಮಹೇಶ ನಾಲವಾಡ ಅವರಿಗೆ ಟಿಕೆಟ್ ಹಂಚಿಕೆಯಾಗಿದೆ. ದೆಹಲಿಯಲ್ಲಿ ಶನಿವಾರ ಸಭೆ ಸೇರಿದ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸುಮಾರು 200ರಷ್ಟು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.
ಭಾನುವಾರ ಅಧಿಕೃತ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಎಂಎಲ್​ಸಿ ನಾಗರಾಜ ಛಬ್ಬಿ, ಪಾಲಿಕೆ ಸದಸ್ಯ ಪ್ರಫುಲ್ಲಚಂದ್ರ ರಾಯನಗೌಡ್ರ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, 2013ರಲ್ಲಿ ಡಾ. ಮಹೇಶ ನಾಲವಾಡ 40447ಮತ ಪಡೆದಿರುವುದನ್ನು ಪಕ್ಷದ ವರಿಷ್ಠರು ಪರಿಗಣಿಸಿದಂತಾಗಿದೆ. ನಾಲ್ಕು ದಿನಗಳ ಹಿಂದೆ ಹಿರಿಯ ಕಾಂಗ್ರೆಸ್ಸಿಗ ಮಧುಸೂದನ ಮಿಸ್ತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೆಂಟ್ರಲ್ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಪರವಾಗಿ ಕೆಲಸ ಮಾಡಬೇಕೆಂದು ನಾಗರಾಜ ಛಬ್ಬಿ ಹಾಗೂ ರಾಯನಗೌಡ್ರ ಅವರಿಗೆ ಸೂಚ್ಯವಾಗಿ ಹೇಳಲಾಗಿತ್ತು.

ಸೆಂಟ್ರಲ್ ಕ್ಷೇತ್ರದಿಂದ 6ನೇ ಬಾರಿ ಆಯ್ಕೆಯಾಗಲು ಸ್ಪರ್ಧಿಸುತ್ತಿರುವ ಬಿಜೆಪಿಯ ಜಗದೀಶ ಶೆಟ್ಟರ್ ವಿರುದ್ಧ ಡಾ. ಮಹೇಶ ನಾಲವಾಡ (ಕಾಂಗ್ರೆಸ್), ರಾಜಣ್ಣ ಕೊರವಿ (ಜೆಡಿಎಸ್) ಘೊಷಿತ ಅಭ್ಯರ್ಥಿಯಾಗಿದ್ದಾರೆ. ಹು-ಧಾ ಪೂರ್ವಕ್ಕೆ ಪ್ರಸಾದ ಅಬ್ಬಯ್ಯ, ಹು-ಧಾ ಪಶ್ಚಿಮಕ್ಕೆ ಇಸ್ಮಾಯಿಲ್ ತಮಟಗಾರ, ಧಾರವಾಡ ಗ್ರಾಮೀಣಕ್ಕೆ ವಿನಯ ಕುಲಕರ್ಣಿ, ನವಲಗುಂದ-ವಿನೋದ ಅಸೂಟಿ, ಕಲಘಟಗಿ-ಸಂತೋಷ ಲಾಡ್ ಹಾಗೂ ಕುಂದಗೋಳಕ್ಕೆ ಸಿ.ಎಸ್. ಶಿವಳ್ಳಿ ಅವರಿಗೆ ಟಿಕೆಟ್ ಹಂಚಿಕೆಯಾಗಿದೆ ಎಂದು ತಿಳಿದುಬಂದಿದೆ.

loading...