ಸಿದ್ಧರಾಮಯ್ಯ ಸರ್ಕಾರ ಭ್ರಷ್ಟ ಸರಕಾರ: ಶೆಟ್ಟರ್

0
24
loading...

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರ ರಾಜ್ಯ ಈವರೆಗೆ ಕಂಡಿರುವ ಭ್ರಷ್ಟ ಸರ್ಕಾರವೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇಂದಿಲ್ಲಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಕಾವತಿ ಹಗರಣದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿದ್ದು ಸಿಬಿಐಗೆ ತನಿಖೆ ವಹಿಸಲು ಆಗ್ರಹಿಸಿದರೂ ಕೂಡ ತಾವೇ ನ್ಯಾಯಾಂಗ ತನಿಖೆ ಮಾಡಿಸಿ ಪ್ರಕರಣವನ್ನು ಮುಚ್ಚಿ ಹಾಕಿದರು ಎಂದು ಹೇಳಿದರು. ಸದನದಲ್ಲಿ ಕೆಂಪಣ್ಣ ಆಯೋಗದ ವರದಿ ಮಂಡಿಸಬೇಕಿತ್ತು. ಕೆಂಪಣ್ಣ ಆಯೋಗದ ವರದಿಯಲ್ಲಿ ಮುಖ್ಯಮಂತ್ರಿ ತಪ್ಪು ಮಾಡಿರುವುದು ಕಂಡುಬಂದಿದೆ. ಆದರೆ ಸದನದಲ್ಲಿ ವರದಿ ಮಂಡನೆಗೆ ಅವಕಾಶವನ್ನೇ ನೀಡದೆ ಜನರ ತೆರಿಗೆ ಹಣವನ್ನು ಸಿದ್ಧರಾಮಯ್ಯ ದುರುಪಯೋಗ ಮಾಡಿಕೊಂಡರು ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಕಡುಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಜನರು ಈ ಬಾರಿ ಮನೆಗೆ ಕಳುಹಿಸಲಿದ್ದಾರೆಂದು ಅವರು ನುಡಿದರು. ಇನ್ನು ದೇಶದಲ್ಲೂ ಕೂಡ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡುತ್ತಿರುವುದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರ ಇಮೇಜ್‍ಗೆ ಧಕ್ಕೆ ತರುವ ಎಲ್ಲ ಕೆಲಸವನ್ನು ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡಿದ ತೀರ್ಪನ್ನು ಒಪ್ಪಿಕೊಳ್ಳಬೇಕು. ಕೇಂದ್ರದಲ್ಲಿ ಬಿಜೆಪಿಗೆ ಮತಪ್ರಭು ಅಧಿಕಾರ ನೀಡಿದ್ದಾನೆ. ಕಾಂಗ್ರೆಸ್‍ಗೆ ಪ್ರತಿಪಕ್ಷವಾಗುವ ಯೋಗ್ಯತೆಯನ್ನೂ ಜನರು ನೀಡಿಲ್ಲ. ಇದನ್ನು ಒಪ್ಪಿಕೊಂಡು ತೆಪ್ಪಗಿರದೆ ಸುಖಾಸುಮ್ಮನೆ ಇಲ್ಲಸಲ್ಲದ ಆರೋಪವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಶೆಟ್ಟರ್ ಅಭಿಪ್ರಾಯಪಟ್ಟರು. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಧಿವೇಶನ ನಡೆಯಲು ಕಾಂಗ್ರೆಸ್ ಬಿಡುತ್ತಿಲ್ಲ.

ಪ್ರಜಾತಂತ್ರಕ್ಕೆ ವಿರುದ್ಧವಾಗಿ ನಡೆದುಕೊಂಡು ಹೇಗಾದರೂ ಮಾಡಿ ಮೋದಿ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಹುನ್ನಾರ ನಡೆಸಿದೆ. ಆದರೆ ನರೇಂದ್ರ ಮೋದಿ ಅವರ ಸರ್ಕಾರ ಜನರಿಗಾಗಿ ಏನೆಲ್ಲಾ ಮಾಡಿದೆ ಎಂಬುದು ದೇಶದ ಸಮಸ್ತ ನಾಗರಿಕರಿಗೆ ಗೊತ್ತಿದೆ ಎಂದರು. ದೇಶದಲ್ಲಿ ಇಂದು ನರೇಂದ್ರ ಮೋದಿ ವರ್ಸಸ್ ಇತರೆ ಎಲ್ಲ ಪಕ್ಷ ಎನ್ನುವ ವಾತಾವರಣವನ್ನು ಕಾಂಗ್ರೆಸ್ ನಿರ್ಮಾಣ ಮಾಡಿದೆ. ಏನೇ ತಿಪ್ಪರಲಾಗಾ ಹಾಕಿದರೂ ಮೋದಿ ಅವರ ನಾಗಾಲೋಟವನ್ನು ತಡೆಯಲು ಕಾಂಗ್ರೆಸ್‍ನಿಂದ ಸಾಧ್ಯವಿಲ್ಲವೆಂದು ಶೆಟ್ಟರ್ ಭವಿಷ್ಯ ನುಡಿದರು. ಸಂಸದ ಪ್ರಲ್ಹಾದ ಜೋಶಿ, ಎಂ. ನಾಗರಾಜ ಮತ್ತಿತರರು ಗೋಷ್ಠಿಯಲ್ಲಿದ್ದರು.

loading...