ಸುತ್ತಮುತ್ತಿನ ಹಳ್ಳಿಗಳಿಗೆ ಬನಹಟ್ಟಿ ಕೆರೆ ನೀರೇ ಗತಿ

0
14
loading...

ನರಗುಂದ: ತಾಲೂಕಿನಲ್ಲಿ 13 ಗ್ರಾಪಂಗಳಿದ್ದು ಈ ವ್ಯಾಪ್ತಿಗೆ ಸಂಬಂಧಿಸಿದಂತೆ ಕೊಣ್ಣುರ, ಕುರುವಿನಕೊಪ್ಪ, ಮೂಗನೂರ, ಲಖಮಾಪೂರ, ವಾಸನ, ಕಪ್ಪಲಿ ಹಾಗೂ ಕಲ್ಲಾಪುರಗಳಲ್ಲಿ ಕೆರೆಗಳಿಲ್ಲ. ಈ ಗ್ರಾಮದ ಜನತೆಗೆ ಬೊರವೆಲ್ ಮುಖಾಂತರ ನಿತ್ಯ ನೀರು ಒದಗಿಸಲಾಗುತ್ತಿದೆ.

ತಾಲೂಕಿನ ಬನಹಟ್ಟಿ ಹಾಗೂ ಗ್ರಾಮದ ಸಮೀಪವಿರುವ ಮೂಗನೂರ ಗ್ರಾಮದ ಜನತೆ ಒಂದೇ ಕೆರೆಯಿಂದ ನೀರು ಪಡೆದುಕೊಳ್ಳುತಿದ್ದಾರೆ. 22 ಎಕರೆಯಷ್ಟು ಒಂದೆ ಕೆರೆ ಆ ಗ್ರಾಮಗಳ ಮಧ್ಯ ಸ್ಥಳದಲ್ಲಿ ಇರುವುದರಿಂದ ಕೆರೆಗೆ ತೆರಳಿ ನೀರು ಪಡೆಯುವ ಕಾರ್ಯ ನಿತ್ಯ ಅಲ್ಲಿಯ ಗ್ರಾಮಸ್ಥರು ನಡೆಸುತಿದ್ದಾರೆ. ಕೆರೆಯ ಪಕ್ಕದಲ್ಲಿ ಶುದ್ದೀಕರಣ ಘಟಕವಿದ್ದರೂ ಕಳೆದ 2 ತಿಂಗಳಿನಿಂದ ಆ ಶುದ್ದಿಕರಣ ಘಟಕ ಸ್ಥಗಿತಗೊಳಿಸಲಾಗಿದೆ. ಕಾರಣ ಶುದ್ದಿಕರಣಗೊಳಿಸಿ ನಲ್ಲಿಗಳ ಮುಖಾಂತರ ನೀರು ಒದಗಿಸಿದರೆ ಕೆರೆ ಖಾಲಿಯಾಗುವ ಭಯದಿಂದ ಸದ್ಯ ಕೆರೆಯ ನೀರನ್ನು ಹೊತ್ತೊಯ್ಯುವ ರೂಡಿ ಆ ಗ್ರಾಮಸ್ಥರು ಮುಂದುವರೆಸಿದ್ದಾರೆ.
ಮೂಗನೂರ ಗ್ರಾಮಕ್ಕೆ ಕೆರೆಯಿಲ್ಲ ಆ ಗ್ರಾಮಸ್ಥರು ಸಹ ಸಮೀಪದ ಬನಹಟ್ಟಿ ಹತ್ತಿರದ ಕೆರೆಯಿಂದ ನೀರನ್ನು ಕೊಡಗಳ ಹಾಗೂ ಚಕ್ಕಗಾಡಿಗಳ ಮೂಲಕ ಓಯ್ಯುವ ರೂಢಿ ಮಾಡಿಕೊಂಡಿದ್ದಾರೆ. ಸಧ್ಯದ ಸ್ಥಿತಿಯಲ್ಲಿ ಬನಹಟ್ಟಿ ಹಾಗೂ ಮೂಗನೂರ ಗ್ರಾಮಸ್ಥರು ಪಾಚಿ ಗಟ್ಟಿದ ನೀರನ್ನೇ ಕಳೆದ ಎರಡು ತಿಂಗಳಿನಿಂದ ಪಡೆದುಕೊಳ್ಳುತ್ತಿದ್ದಾರೆ. ಆದರೆ ನೀರು ದೊಷವಾಗಿಲ್ಲವೆಂದು ಕಳೆದ ತಿಂಗಳು ಆರೋಗ್ಯ ಇಲಾಖೆಗೆ ನೀಡಿದ ವರದಿಯಿಂದ ತಿಳಿದು ಬಂದ ಪರಿಣಾಮದಿಂದ ಆ ಕೆರೆಯ ನೀರನ್ನೇ ಪಡೆದುಕೊಳ್ಳುತಿದ್ದಾರೆ. ಇನ್ನೆರಡು ತಿಂಗಳಿನಲ್ಲಿ ಬನಹಟ್ಟಿ ಗ್ರಾಮದ ಕೆರೆ ನೀರು ಖಾಲಿಯಾಗಲಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಬನಹಟ್ಟಿ ಗ್ರಾಪಂ ಪ್ರಭಾರಿ ಪಿಡಿಒ ವ್ಹಿ.ಆರ್. ರಾಯನಗೌಡ್ರ ತಿಳಿಸಿದ್ದಾರೆ.

ಬನಹಟ್ಟಿ ಕೆರೆಗೆ ಕಳೆದ ಮೂರು ತಿಂಗಳ ಹಿಂದೆ ನೀರಾವರಿ ಕಾಲುವೆ ಮುಖಾಂತರ ನೀರು ಭರ್ತಿಗೊಳಿಸಲಾಗಿತ್ತು. ಕೆರೆಗೆ ನೀರು ಸಾಗಿಸುವ ಕೆರೆ ರಸ್ತೆ ದಾರಿಯಲ್ಲಿ ತಗ್ಗು ಇದ್ದ ಪರಿಣಾಮ ಆ ಭಾಗದಿಂದ ನೀರು ದೊರೆಯುತಿತ್ತು. ಆದರೆ ಕೆರೆ ರಸ್ತೆ ಪಕ್ಕದ ರೈತರು ಕೆರೆ ರಸ್ತೆ ಎಂದು ದಾಖಲೆಗಳಿಲ್ಲ. ಇದು ನಮ್ಮ ಜಾಗೆಯಾಗಿದೆ ಎಂದು ಅನೇಕ ರೈತರು ಸಧ್ಯದಲ್ಲಿ ಕಾಲುವೆಯಿಂದ ಕೆರೆಗೆ ನೀರು ಭರ್ತಿಗೋಳಿಸವ ಕೆರೆ ರಸ್ತೆಯನ್ನೇ ಮುಚ್ಚಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಲುವೆ ನೀರನ್ನು ಕೆರಗೆ ಹೇಗೆ ಪಡೆಯುವುದು ಎಂಬ ಅನುಮಾನ ಉಂಟಾಗಿದೆ. ಸಧ್ಯದಲ್ಲಿ ಜನ ಕೊಡ ಹೊತ್ತು ಕೆರಯಿಂದ ನೀರು ಪಡೆಯುತಿದ್ದಾರೆ.
ಇನ್ನಿತರ ಬಳಕೆಗಾಗಿ ಬೊರವೆಲ್‍ದಿಂದ ನಲ್ಲಿಗಳ ಮುಖಾಂತರ ಒದಗಿಸಲಾಗುತ್ತಿದೆ. ಆದರೆ ಸಧ್ಯದ ನೀರಿನ ಕೊರತೆ ಇರದಿದ್ದರೂ ಮುಂದಿನ ದಿನಗಳಲ್ಲಿ ನೀರಿನ ತೊಂದರೆಯಾಗಲಿದೆ ಎಂದು ಬನಹಟ್ಟಿ ಗ್ರಾಪಂ ಪಿಡಿಒ ರಾಯನಗೌಡ್ರ ಅವರ ಅನಿಸಿಕೆಯಾಗಿದೆ. ಹೀಗಾಗಿ ಈ ಸಮಸ್ಯೆಪರಿಹಾರಕ್ಕಾಗಿ ಹಿಂದೆ 2014 ರಲ್ಲಿ 56 ಲಕ್ಷರೂದಲ್ಲಿ 1200 ಮೀಟರ್ ಕರೆಯಿಂದ ಮುಖ್ಯ ನೀರಾವರಿ ಕಾಲುವೆವರೆಗೆ ಪೈಪ್‍ಲೈನ್ ಹಾಕಲು ಜಿಪಂ ಹಾಗೂ ನೀರಾವರಿ ನಿಗಮ ಮತ್ತು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈ ಯೋಜನೆ ಅನೇಕ ಅಡೆತಡೆಗಳಿಂದ ಕಾರ್ಯಗೂಡಲಿಲ್ಲ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಕುರಿತು ಶಾಸಕರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಹಿರೇಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿಯ ಕುರುಗೋವಿನಕೊಪ್ಪದ ಜನ ದೂರದ ಕಾಗೆ ಹಳ್ಳದಲ್ಲಿ ವರ್ತಿ ಅಗೆದು ನೀರು ತರುವ ಕಾರ್ಯ ಕಳೆದ 10 ವರ್ಷಗಳಿಂದಲೂ ನಡೆಸಿದ್ದಾರೆ. ಕುರುಗೋವಿನಕೊಪ್ಪ ಗ್ರಾಮದಲ್ಲಿ ಬೋರವೆಲ್‍ಗಳಿದ್ದರೂ ಆ ನೀರು ಉಪ್ಪಾಗಿದೆ ಎಂದು ಆ ನೀರನ್ನು ಬಳಕೆಮಾಡಲು ಮಾತ್ರ ಉಪಯೊಗ ಮಾಡಿಕೊಳ್ಳುತಿದ್ದಾರೆ. ಒಂದು ಕಿಮಿ ಸಾಗಿ ಕಾಗೆ ಹಳ್ಳದಲ್ಲಿ ವರ್ತಿಯಿಂದ ನೀರು ಪಡೆದುಕೊಳ್ಳುವುದನ್ನು ಈಗಲೂ ಆ ಗ್ರಾಮದ ಜನ ಮುಂದುವರೆಸಿಕೊಂಡಿದ್ದಾರೆ.
ಕೆರೆ ಇರದ ವಾಸನ ಕಲ್ಲಾಪೂರ ಹಾಗೂ ಕಪ್ಪಲ್ಲಿ, ಕೊಣ್ಣುರ ಭಾಗಗಳಲ್ಲಿ ಬೋರವೆಲ್ ಮುಖಾಂತರ ನೀರನ್ನು ಒದಗಿಸಲಾಗುತ್ತಿದೆ. ಕುರ್ಲಗೇರಿ ಭಾಗದ ಹೊಸ ಬಡಾವಣೆ ಭಾಗದಲ್ಲಿ ಕಳೆದ 2012 ರಲ್ಲಿ ನಿರ್ಮಿಸಿದ ಆಸರೆ ಯೋಜನೆ ಮನೆಗಳ ಸ್ಥಳದಲ್ಲಿ ಕೆರೆಯಿದ್ದು ಆದರೆ ಆ ನೀರು ಸರಿಯಾಗಿಲ್ಲವೆಂದು ಆಸರೆ ಮನೆಗಳಲ್ಲಿದ್ದ ಜನ ಒಂದು ಕಿಮಿ ಸಾಗಿ ರೈತರು ಜಮೀನಿಗೆ ನೀರು ಒದಗಿಸಲು ತೆರೆಯಲಾದ ಕೃಷಿ ಹೊಂಡದಿಂದ ನೀರು ತರುವ ಕಾರ್ಯ ನಿತ್ಯಕೈಗೊಂಡಿದ್ದಾರೆ. ಇನ್ನು ಪಟ್ಟಣದಲ್ಲಿ 12 ದಿನಗಳಿಗೊಮ್ಮೆ ನೀರು ಒದಗಿಸಲಾಗುತಿದ್ದು ಕೆರೆಯ ನೀರನ್ನು ಬೋರವೆಲ್ ನೀರಿನ ಜೊತೆ ಮಿಶ್ರಣಮಾಡಿ ಒದಗಿಸುತ್ತಿರುವುದರಿಂದ ಜನತೆ ಕುಡಿಯುವ ನೀರು ಶುದ್ದವಾಗಿಲ್ಲ. ಹಾಗೂ ಸಪ್ಪೆಯಾಗಿರುತ್ತದೆ ಉತ್ತಮ ನೀರು ಒದಗಿಸಿ ಎಂದು ಪುರಸಭೆ ಮುಖ್ಯಾಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಲಿರುವುದು ಮುಂದುವರೆದಿದೆ.

ಪಟ್ಟಣದಲ್ಲಿ ಒಂದೇ ಕುಡಿಯುವ ನೀರಿನ ಕೆರೆ ಇರುವುದರಿಂದ ಪಟ್ಟಣದಲ್ಲಿ ಸುಮಾರು 36 ಸಾವಿರ ಜನಸಂಖ್ಯೆ ಇರುವುದರಿಂದ ನಿತ್ಯ ಒಂದೇ ಕೆರೆಯಿಂದ ನೀರು ಒದಗಿಸುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಪಟ್ಟಣದಲ್ಲಿ ಸುಮಾರು 28 ಬೋರವೆಲ್‍ಗಳನ್ನು ಆಯಾ ವಾರ್ಡಿನಲ್ಲಿ ಕಳೆದ 10 ವರ್ಷದ ಹಿಂದೆ ತೆರೆಯಲಾಗಿದೆ. ಅದರ ಮುಖಾಂತರವೂ ಪಟ್ಟಣದ ಜನತೆಗೆ ನೀರು ಒದಗಿಸಲಾಗುತ್ತಿದೆ. ನವಿಲು ತೀರ್ಥ ಆನೇಕಟ್ಟೆಯಿಂದ ಪೈಪ್‍ಲೈನ್ ಮೂಲಕ ಮುಂದಿನ ಅಗಷ್ಟದಲ್ಲಿ ನಿತ್ಯ ಪಟ್ಟಣದ ಜನತೆಗೆ ನೀರು ಒದಗಿಸುವ ಯೋಜನೆ ಜಾರಿಯಾಗಲಿದೆ. ಈಗಾಗಲೇ ಪೈಪ್‍ಲೈನ್ ಅಳವಡಿಕೆ ಕಾಮಗಾರಿ ಶೇ. 80 ರಷ್ಟು ಪೂರ್ಣಗೊಂಡಿದೆ ಎಂದು ಮುಖ್ಯಾಧಿಕಾರಿ ಎನ್.ಎಸ್. ಪಂಡಸೆ ತಿಳಿಸಿದ್ದಾರೆ.

loading...