ಸೇವಾ ದಿನಗಳಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗೈರು..!

0
6
loading...

ನರಗುಂದ: ಪಟ್ಟಣದ ಮಿನಿವಿಧಾನಸೌಧ ಕಟ್ಟಡದಲ್ಲಿರುವ ಕಾರ್ಮಿಕ ಇಲಾಖೆಯ ಕಚೇರಿ ಸೇವಾ ದಿನಗಳಲ್ಲಿಯೂ ಅಧಿಕಾರಿಗಳಿಲ್ಲದೇ ಭಣಗುಡುತ್ತಿವೆ. ಅನೇಕ ಕಾರ್ಮಿಕರು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಲಾಖೆಗೆ ತೆರಳಿದರೆ ಅಲ್ಲಿ ಅಧಿಕಾರಿಗಳೇ ಇರುವುದಿಲ್ಲ ಎಂದು ಕಾರ್ಮಿಕರಿಂದ ದೂರುಗಳು ಕೇಳಿ ಬಂದಿವೆ.
ಕಳೆದ ವರ್ಷ ಹೆರಿಗೆ ರಜೆಯನ್ನು ಪಡೆದುಕೊಂಡ ಕಾರ್ಮಿಕ ಇಲಾಖೆ ಅಧಿಕಾರಿ ಸಂಗೀತಾ ಬೆನಕೊಪ್ಪ, ಸುಮಾರು 11 ತಿಂಗಳಿಂದ ಗೈರಾಗಿದ್ದಾರೆ. ಕಾರ್ಮಿಕರು ಕಚೇರಿಗೆ ಅಲೆದಾಡಿ ಸುಸ್ತಾಗಿ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷತೆಯನ್ನು ಟೀಕಿಸಿದ್ದಾರೆ.
ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಮತ್ತು ಕಾರ್ಮಿಕರಿಗೆ ಇಲಾಖೆಯಿಂದ ದೊರೆಯುವ ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆದುಕೊಳ್ಳಲು ಕಾರ್ಮಿಕರು ತೊಂದರೆಪಡೆಯುವಂತಹ ಸ್ಥಿತಿ ಇಲ್ಲಿ ಉದ್ಬವಿಸಿದೆ. ಪಟ್ಟಣದ ಅನೇಕ ಹೊಟೆಲ್‌ ಮತ್ತು ಇತರ ಕಿರಾಣಿ ಅಂಗಡಿಗಳಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಕಂಡು ಬರುತ್ತಿದೆ. ಇದನ್ನು ಪರಿಶೀಲಿಸಿ ಮಕ್ಕಳ ತಾಯಂದಿರಿಗೆ ಸಲಹೆ ನೀಡಿ ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸಬೇಕಾದ ಕಾರ್ಮಿಕ ಇಲಾಕೆ ಇಲ್ಲಿ ಕಳೆದ ಮೂರು ವರ್ಷಗಳಿಂದ ಯಾವುದೇ ಕಾರ್ಯನಿರ್ವಹಿಸದೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲಾಖೆ ಸೊರಗಿಹೊಗಿದೆ ಎಂದು ಸಾರ್ವಜನಿಕರ ಟೀಕೆಗಳು ಕಂಡು ಬಂದಿವೆ.
ಈ ಕುರಿತು ಕಾರ್ಮಿಕ ಇಲಾಖೆ ಅಧಿಕಾರಿ ಸಂಗೀತಾ ಬೆನಕೊಪ್ಪ ದೂರವಾಣಿಯಲ್ಲಿ ವಿವರ ನೀಡಿ, ಕಾರ್ಮಿಕ ಇಲಾಖೆಯಿಂದ ಎಲ್ಲ ಕೆಲಸಗಳನ್ನು ಸರಿಯಾಗಿ ನಿಭಾಯಿಸಲಾಗುತ್ತಿದೆ. ನರಗುಂದ ಸೇರಿದಂತೆ ರೋಣ ಮತ್ತು ಗದಗ ಮೂರು ತಾಲೂಕುಗಳಲ್ಲಿ ಡೆಪ್ಯೂಟೇಷನ್‌ದಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯಿಂದ ಸಕಾಲಕ್ಕೆ ಕೆಲಸ ನಿರ್ವಹಿಸುವುದು ತೊಂದರೆಯಾಗಿದೆ.
ಕಳೆದ ಎರಡು ವರ್ಷದಿಂದ ಮೂರು ತಾಲೂಕುಗಳಲ್ಲಿ ಡೆಪ್ಯೂಟೇಷನ್‌ ಮೇಲೆ ಕಾರ್ಯನಿರ್ವಹಿಸುವುದರಿಂದ ತೊಂದರೆಯಾಗುತ್ತಿದೆ ಎಂದು ತಿಳಿಸಿದರಲ್ಲದೇ, ಕಾರ್ಮಿಕರು ಕಚೇರಿಗೆ ಬಂದ ಸಂದರ್ಭದಲ್ಲಿ ನಾನು ಬೇರೊಂದು ತಾಲೂಕಿನಲ್ಲಿ ಕೆಲಸ ನಿರ್ವಹಿಸುವ ಸಂದರ್ಭವಿದ್ದ ಪರಿಣಾಮ ತೊಂದರೆಯಾಗಿರಬಹುದೆಂದು ಅವರು ತಮ್ಮ ಕರ್ತವ್ಯದ ಕುರಿತು ಸಮರ್ಥನೆ ನೀಡಿದ್ದಾರೆ.
ಕಾರ್ಮಿಕರಿಗೆ ಸರ್ಕಾರಿಂದ ದೊರೆಯಬಹುದಾದ ಅನೇಕ ಸವಲತ್ತುಗಳ ಕುರಿತು ಇಲಾಖೆಯಲ್ಲಿ ಎಲ್ಲ ಮಾಹಿತಿ ದೊರೆಯುವುದರಿಂದ ಯಾವ ಮಾಹಿತಿಯನ್ನು ಕಾರ್ಮಿಕರಿಗೆ ಮತ್ತು ಅವರ ಮಕ್ಕಳಿಗೆ ನೀಡಿದ್ದೀರೆಂದು ಕೇಳದ ಪ್ರಶ್ನೆಗೆ ಅವರಿಂದ ಅಸಮಂಜಸ ಉತ್ತರ ದೊರೆಯಿತು. ತಾಲೂಕಿನಲ್ಲಿ ಎಷ್ಟು ಕಾರ್ಮಿಕರಿದ್ದಾರೆ ಮತ್ತು ಎಷ್ಟು ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದರೂ ಈ ಸಮಸ್ಯೆ ಪರಿಹಾರ ಇದುವರೆಗೂ ಕಂಡಿಲ್ಲವೆಂದು ಕೇಳಿದ ಪ್ರಶ್ನೆಗೆ ಸರಿಯಾದ ಮಾಹಿತಿ ದೊರೆಯಲಿಲ್ಲ.

loading...