ಹೆಗಡೆ ಅವರ ತತ್ವ ಸಿದ್ಧಾಂತ ಬಿಜೆಪಿ ಸದಾ ಗೌರವಿಸುತ್ತಾ ಬಂದಿದೆ: ಕಾಗೇರಿ

0
17
loading...

ಕನ್ನಡಮ್ಮ ಸುದ್ದಿ-ಶಿರಸಿ: ಮೌಲ್ಯಾಧಾರಿತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಅವಮಾನ ಮಾಡಿದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗುವ ಮೂಲಕ ಶಶಿಭೂಷಣ ಹೆಗಡೆ ಹೆಗಡೆಯವರಿಗೆ ಅವಮಾನ ಮಾಡಿದ್ದಾರೆ ಎಂದು ಶಾಸಕ ಹಾಗೂ ಶಿರಸಿ- ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದರು.
ಇಲ್ಲಿನ ಯಲ್ಲಾಪುರ ನಾಕಾ ವೃತ್ತದಲ್ಲಿರುವ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಶ್ವೇಶ್ವರ ಹೆಗಡೆ ಕಾಗೇರಿ 2ನೇ ಹಂತದ ಪ್ರಚಾರ ಅಭಿಯಾನಕ್ಕೆ ಅವರು ಚಾಲನೆ ನೀಡಿದರು. ನಂತರ ಮಾಧ್ಯಮದರ ಜೊತೆ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ ಅವರ ಮೌಲ್ಯಾಧಾರಿತ ರಾಜಕಾರಣ, ತತ್ವ ಸಿದ್ಧಾಂತವನ್ನು ಬಿಜೆಪಿ ಸದಾ ಗೌರವಿಸುತ್ತಾ ಬಂದಿದೆ. ಬಿಜೆಪಿಯಿಂದಲೇ ಹೆಗಡೆ ಅವರ ಮೌಲ್ಯಗಳು ಉಳಿದುಕೊಂಡು ಬಂದಿದೆ. ಬಿಜೆಪಿ ಅವರನ್ನು ರಾಷ್ಟ್ರ ಮಟ್ಟದಲ್ಲಿ ಬೆಂಬಲಿಸಿದೆ. ಆದರೆ ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಾವು ರಾಮಕೃಷ್ಣ ಹೆಗಡೆ ಅವರ ಕುಟುಂಬದವರು ಎಂದು ಹೇಳಿಕೊಂಡು ಅವರ ಭಾವಚಿತ್ರಗಳನ್ನು ಬಳಸಿ ಪ್ರಚಾರ ಪಡೆಯುತ್ತಿದ್ದಾರೆ. ಇದು ಕ್ಷೇತ್ರದ ಜನರಲ್ಲಿ ಆಶ್ಚರ್ಯ ಮತ್ತು ಆಘಾತ ಉಂಟಾಗಿದೆ. ಈ ಹಿಂದೆ ಜೆಡಿಎಸ್ ಪಕ್ಷವು ರಾಮಕೃಷ್ಣ ಹೆಗಡೆ ಅವರಿಗೆ ಸಾಕಷ್ಟು ಅವಮಾನ ಮಾಡಿತ್ತು. ಮೌಲ್ಯಯುತ ರಾಜಕಾರಣಿಯಾಗಿದ್ದ ಹೆಗಡೆ ಸೋಲಿಗೆ ಜೆಡಿಎಸ್ ವರಿಷ್ಠರೇ ನೇರ ಕಾರಣರಾಗಿದ್ದರು. ಈಗ ಹೆಗಡೆ ಕುಟುಂಬದ ಕುಡಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿರುವುದು ಹೆಗಡೆ ರಾಜಕೀಯ ಮೌಲ್ಯಕ್ಕೆ ಮಾಡಿದ ಅಪಮಾನವಾಗಿದೆ. ಚುನಾವಣೆಯಲ್ಲಿ ಮತ ಪಡೆಯಲು ಮಾತ್ರ ರಾಮಕೃಷ್ಣ ಹೆಗಡೆ ಹೆಸರು ಬಳಕೆ ಸರಿಯಲ್ಲ ಎಂದರು.

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗುವ ವೇಳೆ, ಕೇಂದ್ರ ಸಚಿವ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಆಯ್ಕೆ ಮಾಡುವಲ್ಲಿ ಬಿಜೆಪಿ ಕೊಡುಗೆ ಅನನ್ಯ. ಅವರನ್ನು ಎಲ್ಲಾ ಕಾಲದಲ್ಲಿಯೂ ಬಿಜೆಪಿ ಬೆಂಬಲಿಸಿದೆ. ಅವರ ಮೌಲ್ಯಾಧಾರಿತ ರಾಜಕಾರಣವನ್ನು ಅರಿತು ಅವರ ತತ್ವ ಸಿದ್ಧಾಂತಗಳ ಅಡಿಯಲ್ಲಿ ನಾನು ಮುನ್ನಡೆಯುತ್ತೇನೆ. ಮುಂದೆ ಬಿಜೆಪಿ ಸರ್ಕಾರ ಬಂದಾಗ ಅವರು ಜಾರಿಗೆ ತಂದಿರುವ ಯೋಜನೆಗಳನ್ನು ಸಮರ್ಪಕವಾಗಿ ಮುಂದುವರೆಸಿಕೊಂಡು ಹೋಗಲು ಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

 

loading...