ಹೆಗಡೆ ಹೇಳಿಕೆಗೆ ತಿರುಗೇಟು ನೀಡಿದ ಸೈಯದ

0
15
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಸಚಿವ ಆರ್.ವಿ ದೇಶಪಾಂಡೆಯವರು ಈ ನಾಲ್ಕುವರೆ ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದಾಗಿದೆ. ಅಸಾಧ್ಯವಾಗಿದ್ದ ದಾಂಡೇಲಿ ತಾಲೂಕು ರಚನೆಯಿರಬಹುದು, ವಿಟಿಯು ಕೌಶಲ್ಯಾಭಿವೃದ್ಧಿ ಕೇಂದ್ರ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಹೆಗ್ಗಳಿಕೆ ದೇಶಪಾಂಡೆಯವರಿಗೆ ಸಲ್ಲಬೇಕು.
ಸಚಿವ ದೇಶಪಾಂಡೆಯವರ ಅಭಿವೃದ್ಧಿ ಕಾರ್ಯವನ್ನು ಸಹಿಸದ ಮಾಜಿ ಶಾಸಕ ಸುನೀಲ ಹೆಗಡೆಯವರು ಸುಳ್ಳು ಹಾಗೂ ವ್ಯರ್ಥ ಆರೋಪ ಮಾಡುತ್ತಿರುವುದು ಶೋಭೆಯಲ್ಲ ಎಂದು ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ ಅವರು ಸುನೀಲ ಹೆಗಡೆಯವರಿಗೆ ತಿರುಗೇಟು ನೀಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಾಂಡೇಲಿಯಲ್ಲಿ ಜಿ ಪ್ಲಸ್ 2 ಮಾದರಿಯಲ್ಲಿ ಆಶ್ರಯ ಮನೆ ನಿರ್ಮಾಣಕ್ಕೆ ಉಪಯುಕ್ತ ಕ್ರಮ ಕೈಗೊಳ್ಳಲಾಗಿದೆ. ಜಿ ಪ್ಲಸ್ 2 ಆಶ್ರಯ ಮನೆ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಆದ ಬಳಿಕವೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಸೈಯದ ತಂಗಳು ಹೇಳಿದ್ದಾರೆ.

ಸಿ.ಎಸ್.ಆರ್ ಯೋಜನೆಯಡಿ ಸಾಕಷ್ಟು ಅನುದಾನಗಳು, ಅಭಿವೃದ್ಧಿ ಯೋಜನೆಗಳನ್ನು ದೇಶಪಾಂಡೆಯವರು ತಂದಿರುವುದನ್ನು ಸುನೀಲ ಹೆಗಡೆಯವರು ಮರೆತಿರಬೇಕು. ಶುದ್ದ ಕುಡಿಯುವ ನೀರಿನ ಘಟಕಗಳು, ಹೈಟೆಕ್ ಶೌಚಾಲಯಗಳು, ಬಸ್ ಶೆಲ್ಟರ್ಸ್‍ಗಳು ನಿರ್ಮಾಣಗೊಂಡಿದೆ. ಸರಕಾರಿ ಸೌಲಭ್ಯದಿಂದ ವಂಚಿತರಾದ 2000 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡಿದ ಹಿರಿಮೆಯನ್ನು ಹೊಂದಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ನಡೆದಿವೆ. ನುಡಿದಂತೆ ನಡೆದ ದೇಶಪಾಂಡೆಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟೀಕೆ ಮಾಡುವುದು ಓಟಿಗಾಗಿ ಮಾಡುವ ಗಿಮಿಕ್. ಅಭಿವೃದ್ಧಿಯನ್ನೆ ಮಾನದಂಡವಾಗಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳಿಗಾಗಿ ಸದಾ ಶ್ರಮಿಸುವ ದೇಶಪಾಂಡೆಯವರು ಈ ಭಾರಿ ಪ್ರಚಂಡ ಮತಗಳಿಂದ ಆರಿಸಿ ಬರಲಿದ್ದಾರೆ ಎಂದು ಸೈಯದ ತಂಗಳ ಹೇಳಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪೂಜಾರ, ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ಪಕ್ಷದ ವಕ್ತಾರುರಗಳಾದ ಆದಂ ದೇಸೂರು, ವಿ.ಆರ್.ಹೆಗಡೆ, ಪಕ್ಷದ ಮುಖಂಡರುಗಳಾದ ತಸ್ವರ ಸೌದಗಾರ, ಕರೀಂ ಅಜರೇಕರ, ಆರ್.ಪಿ.ನಾಯ್ಕ, ಎನ್.ಎಸ್.ನಾಯ್ಕ, ಎಸ್.ಜಿ.ಕೊಪ್ಪಳ, ಫಾರುಕು, ನಗರ ಸಭಾ ಸದಸ್ಯರುಗಳಾದ ನಂದೀಶ ಮುಂಗರವಾಡಿ, ಅಡಿವೆಪ್ಪ ಭದ್ರಕಾಳಿ ಮೊದಲಾದವರು ಉಪಸ್ಥಿತರಿದ್ದರು.

loading...