ಅಂಕೋಲಾ ಬಂಡಿಹಬ್ಬದಂದು ನಡೆಯದ ಪ್ರಾಣಿಬಲಿ: ಸ್ವಾಮೀಜಿ ಹರ್ಷ

0
10
loading...

ಕನ್ನಡಮ್ಮ ಸುದ್ದಿ-ಕಾರವಾರ: ಅಂಕೋಲಾದ ಶಾಂತಾದುರ್ಗಾ ದೇವಿಯ ಬಂಡಿಹಬ್ಬದಂದು ನಡೆಯುವ ಪ್ರಾಣಿಬಲಿಯನ್ನು ತಡೆಯಲು ಯಶಸ್ವಿಯಾಗಿದ್ದು ಇದು ನೂರಾರು ವರ್ಷಗಳ ಕ್ರೂರ, ಮೌಢ್ಯ, ಅಂಧ ಸಂಪ್ರದಾಯಕ್ಕೆ ತೆರೆ ಎಳೆದಂತಾಗಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ ಹೇಳಿದ್ದಾರೆ.
ಅವರು ಇಂದು ಇಲ್ಲಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 1963ರ ನಿಯಮಗಳು 1975ರ ತಿದ್ದುಪಡಿ ಮೊದಲಾದ ಕಾನೂನಿನಡಿಯಲ್ಲಿ ಅಂಕೋಲಾದ ಬಂಡಿಹಬ್ಬದಂದು ಪ್ರಾಣಿಬಲಿಯನ್ನು ಸಂಪೂರ್ಣವಾಗಿ ತಡೆಯುವಲ್ಲಿ ಜಿಲ್ಲಾಡಳಿತ, ಪೋಲಿಸ್ ಇಲಾಖೆ ಯಶಸ್ವಿಯಾಗಿದ್ದು ಇದು ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಮತ್ತೊಂದು ಹೊಸಮೈಲಿಗಲ್ಲನ್ನು ಸ್ಥಾಪಿಸಿದಂತಾಗಿದೆ ಎಂದು ದಯಾನಂದ ಸ್ವಾಮೀಜಿ ಹೇಳಿದರು.

ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಕ್ರೂರ, ಮೌಢ್ಯ ಹಾಗೂ ಅಂಧ ಸಂಪ್ರದಾಯಕ್ಕೆ ತೆರೆಎಳೆಯಲಾಗಿದ್ದು, ಪ್ರಾಣಿಬಲಿ ನಿಲ್ಲಿಸಿ, ಸಾತ್ವಿಕ ಪೂಜೆ ಸಲ್ಲಿಸುವರ ಮೂಲಕ ರಕ್ತಮುಕ್ತ-ಜೀವಹಿಂಸಾ ಮುಕ್ತ ಶುದ್ಧ ಧರ್ಮಕ್ಷೇತ್ರವಾಗಿ ಅಂಕೋಲಾದ ಶಾಂತಾದುರ್ಗಾ ದೇವಸ್ಥಾನವಾಗಿ ಬದಲಾಯಿತು ಎಂದರು.
ಪ್ರಾಣಿ ಬಲಿ ಮೂಲಕ ವಧಾಲಯವಾಗುತ್ತಿದ್ದ ಶಾಂತದುರ್ಗಾ ದೇವಾಲಯ ದಿವ್ಯಾಲಯವಾಗಿ, ಧ್ಯಾನಾಲಯವಾಗಿ ಹಾಗೂ ರಕ್ತಕ್ಷೇತ್ರಕ್ಕೆ ಬದಲಾಗಿ ಭಕ್ತಕ್ಷೇತ್ರವಾಗಿ ಬದಲಾಯಿತು ಎಂದು ದಯಾನಂದ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ಈಗಾಗಲೇ ರಾಜ್ಯದ ವಿವಿಧೆಡೆ ಭಕ್ತಿಯ ಹೆಸರಿನಲ್ಲಿ 800 ಕಡೆಗಳಲ್ಲಿ ಸುಮಾರು 3 ಕೋಟಿಗಿಂತ ಹೆಚ್ಚು ಪ್ರಾಣಿ ಬಲಿಯನ್ನು ನಿಲ್ಲಿಸಲು ಯಶಸ್ವಿಯಾಗಿದ್ದೇನೆ ಎಂದ ದಯಾನಂದ ಸ್ವಾಮೀಜಿ ದೇವರು ಧರ್ಮದ ಹೆಸರಿನಲ್ಲಿ ಅಂಧಶ್ರದ್ಧೆಯ ಬಗ್ಗೆ ಜನತೆ ಜಾಗೃತಿ ಮೂಡಿಸುವ ಕೆಲಸ ತಾವು ಮಾಡುತ್ತಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ತಾವು ಬಾವಿಕೇರಿಯ ಕಾನಬೀರ, ಬೇಲೇಕೇರಿಯ ಜೈನಬೀರ, ಕದ್ರಾದ ಮಹಾಮಾಯ ದೇವಸ್ಥಾನಗಳಿಗೂ ಭೇಟಿ ನೀಡಿ ಅಲ್ಲಿಯ ಆಡಳಿತ ಮಂಡಳಿ ಹಾಗೂ ಭಕ್ತರನ್ನು ಭೇಟಿಯಾಗಿ ಧಾರ್ಮಿಕ ಸ್ಥಳಗಳನ್ನು ವಧಾ ಕೇಂದ್ರಗಳನ್ನಾಗಿ ಪರಿವರ್ತಿಸದಂತೆ ಮನವಿ ಮಾಡುತ್ತೇನೆ ಎಂದು ದಯಾನಂದ ಸ್ವಾಮೀಜಿ ಹೇಳಿದರು.

loading...