ಅತ್ಯಧಿಕ ಮತಗಳ ಅಂತರದಿಂದ ದೇಶಪಾಂಡೆಯವರ ಗೆಲುವು: ಪ್ರಸಾದ ದೇಶಪಾಂಡೆ ವಿಶ್ವಾಸ

0
7
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಹಳಿಯಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆಯವರ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅವರ ಹಿರಿಮಗ ಪ್ರಸಾದ ದೇಶಪಾಂಡೆಯವರು ಮನದ ಮಾತನ್ನು ಪತ್ರಿಕೆಯೊಂದಿಗೆ ಹಂಚಿಕೊಂಡದ್ದು ಹೀಗೆ.
ವರದಿಗಾರ : ಸರ್‌, ನಮಸ್ತೆ, ಹೇಗಿದೆ ವಾತವರಣ? ಪ್ರಸಾದ
ದೇಶಪಾಂಡೆ: ನಮಸ್ತೆ, ಚೆನ್ನಾಗಿದೆ.
ವರದಿಗಾರ : ದಿನದಿಂದ ದಿನಕ್ಕೆ ಕಾವೇರುತ್ತಿದೆ, ಚುನಾವಣೆ? ನಿಮಗೆ ಈ ಕ್ಷೇತ್ರದ ಬಗ್ಗೆ ಏನನ್ನಿಸುತ್ತದೆ?
ಪ್ರಸಾದ ದೇಶಪಾಂಡೆ: ಕಳೆದ ನಾಲ್ಕುವರೆ ವರ್ಷಗಳಲ್ಲಿ ದೇಶಪಾಂಡೆ ಸಾಹೇಬ್ರು ಈ ಕ್ಷೇತ್ರದಲ್ಲಿ ಮಾಡಿದ ಕೆಲಸ ಕಾರ್ಯಗಳು ಅಭೂತಪೂರ್ವ. ಅವರು ತಂದ ಅನುದಾನಗಳು, ಯೋಜನೆಗಳು, ಕಾರ್ಯಕ್ರಮಗಳೆ ಅವರ ಗೆಲುವಿನಲ್ಲಿ ಅದರಲ್ಲೂ ಅತ್ಯಧಿಕ ಮತಗಳ ಅಂತರದ ಗೆಲುವಿಗೆ ಪ್ರಮುಖ ಸಹಕಾರಿಯಾಗಲಿದೆ. ನೋಡಿ, ದಾಂಡೇಲಿ ತಾಲೂಕು ರಚನೆಯಿರಬಹುದು, ಕೋಟಿ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ದೇಶಪಾಂಡೆ ಸಾಹೇಬ್ರು ಮಾಡಿದ್ದಾರೆ. ಅಭಿವೃದ್ಧಿಯ ಹೊನಲನ್ನೆ ಹರಿಸಿರುವ ದೇಶಪಾಂಡೆ ಸಾಹೇಬ್ರ ಪರವಾಗಿ ಕ್ಷೇತ್ರದಲ್ಲೆಡೆ ಭರ್ಜರಿ ಅಲೆಯಿದೆ. ಇದು ಅವರ ಗೆಲುವಿನ ಅಂತರವನ್ನು ಹೆಚ್ಚಿಸಲಿದೆ.
ವರದಿಗಾರ: ತಾವು ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಚಾರದ ಜವಾಬ್ದಾರಿ ತೆಗೆದುಕೊಂಡಿದ್ದೀರಿ. ನಿಮಗೆ ಏನನಿಸ್ತದೆ?
ಪ್ರಸಾದ ದೇಶಪಾಂಡೆ: ಇದು ಚುನಾವಣೆ. ಚುನಾವಣೆ ಅಂದ ಮೇಲೆ ಸಾಧನೆಯನ್ನು ಮನೆ ಮನಗಳಿಗೆ ಮುಟ್ಟಿಸುವ ಕೆಲಸ ಮಾಡಲೆಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನನಗೆ ಬಹಳ ಖುಷಿಯಾಗುವುದು ಏನೆಂದರೇ, ನಮ್ಮ ಕ್ಷೇತ್ರದ ಜನರಿಗೆ ದೇಶಪಾಂಡೆಯವರ ಮೇಲೆ ಅಪಾರವಾದ ವಿಶ್ವಾಸವಿದೆ. ದೇಶಪಾಂಡೆ ಸಾಹೇಬ್ರ ಬಳಿ ಸಮಸ್ಯೆಗಳನ್ನು ಹೇಳಿಕೊಂಡು ಹೋದರೇ ಅದಕ್ಕೆ ತ್ವರಿತಗತಿಯಲ್ಲಿ ಪರಿಹಾರ ಸಿಗುತ್ತದೆ ಎಂಬ ಬಲವಾದ ನಂಬಿಕೆ ಕ್ಷೇತ್ರದ ಜನರಿಗೆ ಇದೆ. ಇದೇ ನಮ್ಮ ಗೆಲುವಿನ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.
ವರದಿಗಾರ: ನಿಮ್ಮ ತಂದೆಯವರ ರಾಜಕೀಯ ಜೀವನದ ಬಗ್ಗೆ ನೀವು ಏನು ಹೇಳುತ್ತೀರಿ.
ಪ್ರಸಾದ ದೇಶಪಾಂಡೆ: ಇಂಥವರ ಮಗನಾಗಿ ಹುಟ್ಟಿದ್ದಕ್ಕೆ ಧನ್ಯನಾಗಿದ್ದೇನೆ. ತಂದೆಯವರ ಕ್ರಿಯಾಶೀಲತೆ, ಬತ್ತಾದ ಉತ್ಸಾಹ, ತಾಂತ್ರಿಕ ಯುಗಕ್ಕೆ ಬೇಕಾದ ಅವರ ಚಿಂತನೆಯ ಲಹರಿಗಳು, ಯೋಜನೆಗಳು, ಹೊಸ ಹೊಸ ಯೋಚನೆ, ಯೋಜನೆಗಳನ್ನು ಕಾರ್ಯಗತಗೊಳಿಸುವ ಅವರ ಕಾರ್ಯವೈಖರಿ ಹಾಗೂ ವಿಶೇಷವಾಗಿ ನುಡಿದಂತೆ ನಡೆಯುವ ಮತ್ತು ನಡೆದಂತೆ ನುಡಿಯುವ ಅವರ ಗುಣಸ್ವಭಾವ ನಮಗೆ ಪ್ರೇರಣಾದಾಯಿಯಾಗಿದೆ.
ವರದಿಗಾರ: ಅಭಿವೃದ್ಧಿ ರಾಜಕೀಯ ಮತ್ತು ಧರ್ಮದ ಹೆಸರಿನಲ್ಲಿ ರಾಜಕೀಯ, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ್ರಸಾದ ದೇಶಪಾಂಡೆ: ನೋಡಿ, ಅಭಿವೃದ್ಧಿಯಲ್ಲಿ ಧರ್ಮವಿರಬೇಕು, ಆದ್ರೆ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಬಾರದು. ಹುಟ್ಟು ಸಾವು ಸಹಜ ಅಂದ್ಮೇಲೆ, ಜಾತಿ, ಧರ್ಮ, ಭಾಷೆಯನ್ನು ಮೀರಿ ನಿಂತು ನಾವೆಲ್ಲರೂ ಒಂದೇ ಎಂಬ ಭಾತೃತ್ವದಡಿ ಸಮರಸವೆ ಜೀವನ ಎಂಬುವುದನ್ನು ಮೈಗೂಡಿಸಿ, ಎಲ್ಲರೊಂದಿಗೆ ಎಲ್ಲರಂತೆ ಬಾಳಬೇಕು. ಚುನಾವಣೆ ಬರ್ತಾದೆ, ಹೋಗ್ತಾದೆ. ಚುನಾವಣೆ ಬಂದಾಗ ಅಭಿವೃದ್ಧಿಯ ಕನಸುಗಳನ್ನು, ಕಾರ್ಯಗಳನ್ನು ಮರೆತು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದಿದೆಯಲ್ಲಾ, ಅದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗುತ್ತದೆ. ಈ ಎಲ್ಲ ದೃಷ್ಟಿಯಿಂದ ದೇಶಪಾಂಡೆಯವರು ವಿಭಿನ್ನವಾಗಿ ನಿಲ್ಲುತ್ತಾರೆ. ಅವರಲ್ಲಿಯೂ ಮಾನವೀಯ ಗುಣ, ಎಲ್ಲ ಧರ್ಮಿಯರನ್ನು ಸಮಾನಭಾವದಿಂದ, ವಿಶ್ವಾಸದಿಂದ ಕಾಣುತ್ತಾರೆ. ಇದು ಜಾತ್ಯಾತೀತ ವ್ಯವಸ್ಥೆಯ ಬಲವರ್ಧನೆಗೆ ಸಹಕಾರಿಯಾಗಲಿದೆ.
ವರದಿಗಾರ: ಕೊನೆಯದಾಗಿ ಏನು ಹೇಳುತ್ತೀರಾ?
ಪ್ರಸಾದ ದೇಶಪಾಂಡೆ: ಈ ಸಲದ ಚುನಾವಣೆ ಭವಿಷ್ಯದ ಕ್ಷೇತ್ರದ ಪ್ರಗತಿಯ ದಿಕ್ಸೂಚಿ. ಕ್ಷೇತ್ರದ ಮತದಾರರು ಶರವೇಗದಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಿರುವ ಮತ್ತು ಮುಂದೆ ಮಾಡಲಿರುವ ದೇಶಪಾಂಡೆಯವರನ್ನು ಪ್ರಚಂಡ ಮತಗಳಿಂದ ಗೆಲ್ಲಿಸಿ, ಕ್ಷೇತ್ರದ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದ್ದಾರೆ.

loading...