ಅಪವಿತ್ರ ಮೈತ್ರಿ ವಿರೋಧಿಸಿ ಬಿಜೆಪಿಯಿಂದ ಕರಾಳ ದಿನಾಚರಣೆ

0
21
loading...

ಕನ್ನಡಮ್ಮ ಸುದ್ದಿ- ಖಾನಾಪುರ: ವಿಧಾನಸಭಾ ಚುನಾವಣೆಗೂ ಮುನ್ನ ಪರಸ್ಪರ ಟೀಕಾಸ್ತ್ರ ಪ್ರಯೋಗಿಸಿ ಕಚ್ಚಾಡುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಚುನಾವಣೆಯ ಬಳಿಕ ಅಧಿಕಾರದ ಆಸೆಗಾಗಿ ಅಪವಿತ್ರ ಮೈತ್ರಿಯ ಸರ್ಕಾರವನ್ನು ರಚಿಸಲು ಹೊರಟಿದ್ದು ಖಂಡನಾರ್ಹ ಎಂದು ಬಿಜೆಪಿ ಮುಖಂಡ ವಿಠ್ಠಲ ಹಲಗೇಕರ ಹೇಳಿದರು.

ಪಟ್ಟಣದ ಶಿವಸ್ಮಾರಕ ವೃತ್ತದಲ್ಲಿ ಬುಧವಾರ ಜೆಡಿಎಸ್-ಕಾಂಗ್ರೆಸ್ ಅಪವಿತ್ರ ಮೈತ್ರಿ ವಿರೋಧಿಸಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತದಾರರು ಬಿಜೆಪಿಗೆ ಬಹುಮತ ನೀಡಲಿಲ್ಲ ಎಂಬ ಒಂದೇ ವಿಷಯವನ್ನು ಬೆನ್ನು ಹತ್ತಿದ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಗಾಗಿ ಈಗಿನಿಂದಲೇ ಪಾರ್ಟಿ ಫಂಡ್ ಕ್ರೋಢೀಕರಿಸಬೇಕು ಎಂಬ ಉದ್ದೇಶದಿಂದ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡುವ ನಾಟಕವಾಡಿದೆ. ಮುಖ್ಯಮಂತ್ರಿ ಹುದ್ದೆಗಾಗಿ ಪಕ್ಷದ ಗಳನ್ನು ಗಾಳಿಗೆ ತೂರಿರುವ ಕುಮಾರಸ್ವಾಮಿ ಅಧಿಕಾರದ ಆಸೆಯಿಂದ ಅಪವಿತ್ರ ಮೈತ್ರಿಗೆ ಮುಂದಾಗಿದ್ದಾರೆ. ಆದರೆ ಈ ಮೈತ್ರಿ ಬಹುಕಾಲ ಬಾಳುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.
ಕರಾಳ ದಿನಾಚರಣೆ ಅಂಗವಾಗಿ ಪಕ್ಷದ ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕಪ್ಪು ಬಾವುಟ ಪ್ರದರ್ಶಿಸಿದರು. ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಾಬುರಾವ್ ದೇಸಾಯಿ, ಅಪ್ಪಯ್ಯ ಕೊಡೊಳಿ, ಜಾರ್ಡನ್ ಗೋನ್ಸಲ್ವಿಸ್, ಬಾಬು ಬಾಳೇಕುಂದ್ರಿ, ಮಲ್ಲಪ್ಪ ಮಾರಿಹಾಳ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

loading...