ಅಪೂರ್ಣ ಸ್ಥಿತಿಯಲ್ಲಿ ಪಾಳು ಬಿದ್ದ ಅಂಗಡಿಗಳು

0
40
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ರಸ್ತೆಯ ಪಕ್ಕ ಪ.ಪಂ ನಿರ್ಮಿಸಿದ ಅಂಗಡಿ ಸಂಕೀರ್ಣ ಅಪೂರ್ಣ ಸ್ಥಿತಿಯಲ್ಲಿ ಪಾಳು ಬಿದ್ದಿದೆ. ಈ ಬಗ್ಗೆ ಪ.ಪಂ ಗಮನ ಹರಿಸದೇ ಇರುವ ಬಗ್ಗೆ ಸಾರ್ವಜನಿಕರಿಂದ ಅಸಮಧಾನ ವ್ಯಕ್ತವಾಗುತ್ತಿದೆ.
ಪಾಳುಬಿದ್ದ ಕಟ್ಟಡಗಳು: ಕಳೆದ ಹತ್ತು ವರ್ಷಗಳ ಹಿಂದೆ ಐಡಿಎಸ್‍ಎಮ್‍ಟಿ ಅನುದಾನದಲ್ಲಿ ಹಳೆಯ ತರಕಾರಿ ಮಾರುಕಟ್ಟೆಯ ಪ್ರದೇಶದಲ್ಲಿ ಪ ಪಂ ಗೆ ಆದಾಯದ ಮೂಲವೂ ಆಗುತ್ತದೆ ಹಾಗೂ ಅಂಗಡಿಕಾರರಿಗೆ ಅನೂಕೂಲತೆಯ ಸಲುವಾಗಿ ಸುಮಾರು ಹತ್ತು ಅಂಗಡಿಗಳನ್ನು ನಿರ್ಮಿಸಲಾಗಿತ್ತು, ಕಟ್ಟಡ ಇನ್ನೇನು ಪೂರ್ಣಗೊಳಿಸಬೇಕೆನ್ನುವಾಗಲೇ ಜಾಗದ ಕುರಿತು ತಕರಾರು ಸಲ್ಲಿಸಿರುವುದರಿಂದ ಕಾಮಗಾರಿ ಸಂಪೂರ್ಣ ನೆನೆಗುದಿಗೆ ಬಿತ್ತು.ನಂತರ ವಿವಾದ ಇತ್ಯರ್ಥ ಪಡಿಸಬೇಕೆನ್ನುವ ಇಚ್ಛಾಶಕ್ತಿಯನ್ನು ಆಡಳಿತದವರು ತೋರದೆ ಹೋದ ಹಿನ್ನಲೆಯಲ್ಲಿ ಕಟ್ಟಡಗಳು ಅಪೂರ್ಣ ಸ್ಥಿತಿಯಲ್ಲಿ ಪಾಳು ಬಿದ್ದಿದೆ..
ಕಸದ ತೊಟ್ಟಿಯಂತೆ ,ಮೂತ್ರಾಲಯವಾಗಿ ಬಳಕೆ:ಈಗ ನಿರುಪಯುಕ್ತವಾಗಿರುವ ಕಟ್ಟಡ ಸಾರ್ವಜನಿಕ ಮೂತ್ರಾಲಯವಾಗಿ ಬಳಕೆಯಾಗುತ್ತಿದೆ.ಈ ಕಟ್ಟಡ ಪೂರ್ತಿಗೊಂಡರೆ ಪ.ಪಂ ಗೆ ಆದಾಯ ಹಾಗೂ ಅಂಗಡಿಕಾರರಿಗೆ ಜೀವನ ನಿರ್ವಹಣೆಯ ಮಾರ್ಗೋಪಾಯವೂ ಆಗಲಿದೆ.ಪಟ್ಟಣದ ಆಯಕಟ್ಟಿನ ಸ್ಥಳದಲ್ಲಿ ಅಷ್ಟೇ ಅಲ್ಲ ಪ್ರವಾಸಿ ಮಂದಿರದ ರಸ್ತೆಯ ಪಕ್ಕದಲ್ಲಿ ಸರ್ಕಾರದ ಅಮೂಲ್ಯ ಆಸ್ತಿಯಾದ ಅಪೂರ್ಣ ಕಟ್ಟಡದ ಪೂರ್ಣತೆಗೆ ಆಡಳಿತದವರು ಗಮನ ಹರಿಸದೇ ನಿರ್ಲಕ್ಷ್ಯ ತಾಳಿರುವುದು ಬೇಸರದ ಸಂಗತಿಯಾಗಿದೆ.
ಪ,ಪಂ ಅರಣ್ಯ ಇಲಾಖೆ ನಿರ್ಲಕ್ಷ್ಯ: ಈ ಕುರಿತು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಪ್ರತಿಕ್ರಿಯಿಸಿ ಪ.ಪಂ ಕಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯತನದಿಂದಾಗಿ ಸರ್ಕಾರದ ಅಮೂಲ್ಯ ಆಸ್ತಿ ಹಾಗೂ ಆದಾಯದ ಮೂಲವಾಗಬೇಕಿದ್ದ ಕಟ್ಟಡ ಸಂಪೂರ್ಣ ಹಾಳು ಸುರಿಯುವಂತಾಗಿದೆ. ಕಟ್ಟಡ ಪೂರ್ಣಗೊಳಿಸಿ ಅಂಗಡಿಕಾರರಿಗೆ ನೀಡಿದ್ದರೆ ಹಲವು ಅಂಗಡಿಕಾರರು ಇದರಿಂದ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ಆದರೆ ಇದ್ಯಾವುದೂ ಸಾಧ್ಯವಾಗಲೇ ಇಲ್ಲ.ಕಟ್ಟಡವನ್ನು ಅರಣ್ಯ ಇಲಾಖೆಯ ಕಂಪೌಂಡ್ ಹೊರಗೆ ಕಟ್ಟಲಾಗಿತ್ತು. ಮತ್ತು ಕಟ್ಟಡ ನಿರ್ಮಿಸುವ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದೇ ಕಟ್ಟಡ ಕಾಮಗಾರಿಆರಂಭಿಸಲಾಗಿತ್ತು. ಇಷ್ಟಾಗಿಯೂ ಕಟ್ಟಡದ ನಿರ್ಮಾಣದ ಬಗ್ಗೆ ತಕರಾರು ಅರ್ಜಿ ಸಲ್ಲಿಕೆಯಾದ್ದರಿಂದ ಕೊನೆಗೆ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆ ಮಾಡಲಾಯಿತು.
ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆ

ಸುಮಾರು ಒಂದು ಅಡಿಯಷ್ಟು ಅರಣ್ಯ ಇಲಾಖೆಯ ಜಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆಯೆಂಬ ಅಂಶ ತಿಳಿದುಬಂತು ಕೊನೆಗೆ ವಿವಾದ ಬಗೆಹರಿಸಿಕೊಂಡು ಕಟ್ಟಡ ಪೂರ್ಣಗೊಳಿಸುವ ಬಗ್ಗೆ ಪ.ಪಂ ಆಗಲಿ ಅರಣ್ಯ ಇಲಾಖೆಯಾಗಲಿ ಮುತುವರ್ಜಿ ವಹಿಸಲೇ ಇಲ್ಲ ಹೀಗಾಗಿ ಕಟ್ಟಡ ಅಪೂರ್ಣ ಸ್ಥಿತಿಯಲ್ಲಿಯೇ ಇರುವುದು ವ್ಯವಸ್ಥೆಯನ್ನು ಅಣಕಿಸುವಂತಾಗಿದೆ ಎಂದರು. ಕಾರಣ ಇನ್ನಾದರೂ ಪ.ಪಂ ಈ ಬಗ್ಗೆ ಗಮನ ಹರಿಸಿ ಅಪೂರ್ಣ ಸ್ಥಿತಿಯಲ್ಲಿ ಹಾಳು ಸುರಿಯುತ್ತಿರುವ ಕಟ್ಟಡವನ್ನು ಪೂರ್ಣಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಕುರಿತು ಪ.ಪಂ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾ.ನಿಯವರನ್ನು ಸಂಪರ್ಕಿಸಿದಾಗ
ವ್ಯಾಪಾರ ಮಳಿಗೆಗಳ ಕುರಿತು ರೂಪುರೇಷೆ ಸಿದ್ಧಪಡಿಸಿ ಮುಂದೆ ಬರುವ ಸಾಮಾನ್ಯಸಭೆಯಲಿ ್ಲಸದಸ್ಯರೊಡನೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವದುಎಂದು ತಿಳಿಸಿದರು

loading...