ಆರ್ಥಿಕ ಕ್ಷೇತ್ರದ ಬದಲಾವಣೆ ಒಪ್ಪಿ ಸಹಕಾರಿ ತತ್ವ ಬಲಪಡಿಸಬೇಕು: ಸರಸ್ವತಿ

0
9
loading...

ಕನ್ನಡಮ್ಮ ಸುದ್ದಿ-ಕಾರವಾರ: ಆರ್ಥಿಕ ಕ್ಷೇತ್ರದಲ್ಲಿ ಇತ್ತೀಚೆಗೆ ಆಗುತ್ತಿರುವ ಬದಲಾವಣೆಯನ್ನು ಸಕಾರಾತ್ಮಕವಾಗಿ ಒಪ್ಪಿಕೊಳ್ಳುವ ಮೂಲಕ ಸೌಹಾರ್ದ ಸಹಕಾರಿಗಳು ತಮ್ಮ ಸ್ವಾಯತ್ತತೆಯನ್ನು ಮತ್ತು ಸ್ವತಂತ್ರತೆಯ ಸಹಕಾರಿ ತತ್ವವನ್ನು ಬಲಪಡಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ನಿರ್ದೇಶಕರಾದ ಸರಸ್ವತಿ ಎನ್ ರವಿ ಅಭಿಪ್ರಾಯ ಪಟ್ಟರು.
ಅವರು ಶಿರಸಿಯ ಟಿ.ಎಮ್.ಎಸ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ವತಿಯಿಂದ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಸೌಹಾರ್ದ ಸಹಕಾರಿಗಳಿಗೆ ಸುಸ್ತಿ ಸಾಲ ವಸೂಲಾತಿ ಹಾಗೂ ದಾವಾ ದಾಖಲಾತಿ ಮತ್ತು ಚುನಾವಣಾ ಕುರಿತು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಅವರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ದಿಂದ ಜಿಲ್ಲಾಮಟ್ಟದಲ್ಲಿಯ ಸಹಕಾರಿಗಳಿಗೆ ಅಗತ್ಯ ಮಾಹಿತಿಗಳು ಲಭ್ಯವಾಗಬೇಕು ಎಂಬ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಪರ್ಕ ಕಛೇರಿಗಳನ್ನು ತೆರೆಯಲಾಗಿದೆ. ಸೌಹಾರ್ದ ಸಹಕಾರಿಗೆ ಸಂಬಂದಪಟ್ಟ ಯಾವುದೇ ಮಾಹಿತಿಗಳನ್ನು ಸಹಕಾರಿಗಳು ಸ್ಥಳೀಯವಾಗಿಯೇ ಪಡೆದುಕೊಳ್ಳಬಹುದಾಗಿದೆ. ಕಾಲಕಾಲಕ್ಕೆ ಸಹಕಾರಿಗಳಿಗೆ ಅಗತ್ಯವಾದ ತರಬೇತಿಗಳನ್ನು ಹಮ್ಮಿಕೊಳ್ಳುವ ಮೂಲಕ ಸಹಕಾರಿಗಳನ್ನು ಹೆಚ್ಚು ¨ಲಪಡಿಸುವ ಕಾರ್ಯವನ್ನು ಸಂಯುಕ್ತ ಸಹಕಾರಿ ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಹಕಾರಿಗಳು ಹಾಗೂ ಕೆ.ಡಿ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ನೆರವೇರಿಸಿ ಮಾತನಾಡಿ ಸಹಕಾರಿಗಳು ಬದಲಾದ ಸ್ಥಿತಿಗೆ ಅನುಗುಣವಾಗಿ ತಮ್ಮ ದಾಖಲೆಗಳನ್ನು ಉತ್ತಮ ಪಡಿಸಿಕೊಳ್ಳಬೇಕಾಗಿದೆ. ಬದಲಾವಣೆಗೆ ಒಗ್ಗಿಕೊಳ್ಳುವವರು ಬದುಕಿ ಉಳಿಯುತ್ತಾರೆ ಎನ್ನುವ ಪರಿಸ್ಥಿತಿ ಇಂದಿನದಾಗಿದೆ. ಈ ನಿಟ್ಟಿನಲ್ಲಿ ಸಹಕಾರಿಗಳು ತಮ್ಮ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಶಿಧರ ಎಲೆ ಭಾಗವಹಿಸಿ ಸೌಹಾರ್ದ ಸಹಕಾರಿಯಲ್ಲಿ ಚುನಾವಣಾ ಪ್ರಕ್ರಿಯೆಗಳು ಮತ್ತು ಸುಸ್ತಿ ಸಾಲಗಳ ದಾವಾ ದಾಖಲಾತಿಯ ಬಗ್ಗೆ ತರಬೇತಿ ನಡೆಸಿಕೊಟ್ಟರು. ಸೌಹಾರ್ದ ಸಂಯುಕ್ತ ಸಹಕಾರಿಯ ವಿಭಾಗೀಯ ಕಛೇರಿಯ ಅಧಿಕಾರಿಗಳಾದ ವೆಂಕಟೇಶ ರಾಠೋಡ ಅತಿಥಿಗಳನ್ನು ಸ್ವಾಗತಿಸಿದರು. ಸ್ಕೊಡ್‍ವೆಸ್ ಮಹಿಳಾ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕರಾದ ಗಣಪತಿ ನಾಯ್ಕ ವಂದಿಸಿದರು.

loading...