ಆಹಾರ ಬೆಳೆ ಭತ್ತದೊಂದಿಗೆ ವಾಣಿಜ್ಯ ಬೆಳೆಯತ್ತ ರೈತರ ಚಿತ್ತ

0
25
loading...

ನಾಗರಾಜ ಪ ಶಹಾಪುರಕರ
ಕನ್ನಡಮ್ಮ ಸುದ್ದಿ-ಹಳಿಯಾಳ: ಕೃಷಿಯನ್ನೇ ಹೆಚ್ಚಾಗಿ ಅವಲಂಬಿತವಾಗಿರುವ ಹಳಿಯಾಳ ತಾಲೂಕಿನಲ್ಲಿ ವಾಣಿಜ್ಯ ಬೆಳೆಯಾದ ಕಬ್ಬಿನ ಫಸಲು ಬೆಳೆಸುವ ಕ್ಷೇತ್ರವು ವರ್ಷಂಪ್ರತಿ ವಿಸ್ತರಣೆಯಾಗುತ್ತಿದೆ. ಇತರ ಬೆಳೆಗಳಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿನ ಆದಾಯ ನೀಡುವ ಕಬ್ಬಿನ ಕೃಷಿಯತ್ತ ರೈತರು ಮುಖ ಮಾಡಿದ್ದಾರೆ.

ತಾಲೂಕಿನಲ್ಲಿ ಕಬ್ಬು ಬೆಳೆಸಲು ಪೂರಕವೆಂಬಂತೆ ಕೆಲ ವರ್ಷಗಳ ಹಿಂದೆ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿದ್ದು ತಮ್ಮ ತಾಲೂಕಿನಲ್ಲಿಯೇ ಸಕ್ಕರೆ ಕಾರ್ಖಾನೆ ಇರುವುದರಿಂದ ಕಬ್ಬು ಸಾಗಾಟಕ್ಕೆ ಹೆಚ್ಚಿನ ಜಂಜಾಟವಿಲ್ಲದ ಕಾರಣ ಆದಾಯ ನೀಡುವ ಕಬ್ಬಿನ ಫಸಲಿನ ಬಗ್ಗೆ ವಿಶೇಷ ಆಸಕ್ತಿ ಕಾಣಸಿಗುತ್ತಿದೆ.
ಹತ್ತಿ ಬೆಳೆಯ ನಂತರ ಉತ್ತಮಪಟ್ಟ ಆರ್ಥಿಕ ಸ್ಥಿತಿಯ ಕಾರಣ ಹಲವಾರು ರೈತರು ತಮ್ಮ ಗದ್ದೆಗಳಲ್ಲಿ ಕೊಳವೆಬಾವಿಯನ್ನು ಕೊರೆಯಿಸಿ ನೀರಾವರಿ ವ್ಯವಸ್ಥೆ ಮಾಡಿಕೊಂಡರು. ಹಾಗೂ ನಿರಂತರವಾಗಿ ಲಭ್ಯವಾಗುವ ಆ ನೀರಿನ ಆಧಾರದ ಮೇಲೆ ಎರಡನೇ ವಾಣಿಜ್ಯ ಬೆಳೆಯಾದ ಕಬ್ಬನ್ನು ಬೆಳೆಸಲು ಆರಂಭಿಸಿದರು. ಆದರೆ ಕಬ್ಬಿನ ಕಾರ್ಖಾನೆಗಳು ಪಕ್ಕದ ಬೆಳಗಾಂವ ಜಿಲ್ಲೆಯಲ್ಲಿ ಹಾಗೂ ಗೋವಾ ರಾಜ್ಯದಲ್ಲಿ ಇರುವುದರಿಂದ ಸಾಗಾಟಕ್ಕೆ ಪ್ರತಿವರ್ಷ ತುಂಬಾ ಪ್ರಯಾಸಪಡಬೇಕಾಗಿತ್ತು. ಇದರ ಕಾರಣ ಕಬ್ಬು ಬೆಳೆಗಾರರ ಅಪೇಕ್ಷೆಯಂತೆ ನಿರಂತರ ಹೋರಾಟದ ಪರಿಣಾಮವಾಗಿ ಸಕ್ಕರೆ ಕಾರ್ಖಾನೆ ಆರಂಭಗೊಂಡಿದೆ.
ಕೃಷಿ ಇಲಾಖೆಯು ಹಲವಾರು ಯೋಜನೆಗಳಡಿ ಕಬ್ಬು ಬೆಳೆಗಾರರಿಗೆ ವಿವಿಧ ಸೌಲಭ್ಯಗಳನ್ನು ಸಹಾಯಧನದೊಂದಿಗೆ ನೀಡುತ್ತಿದೆ. ತುಂತುರು, ಹನಿ ನೀರಾವರಿ ಘಟಕಗಳು, ಸಾವಯವ ಗೊಬ್ಬರ ತಯಾರಿಕೆ ಮಾಡುವ ತರಬೇತಿ ನೀಡಲಾಗುತ್ತಿದೆ. ರೈತರು ತಮ್ಮ ಮಣ್ಣಿನ ಗುಣಧರ್ಮವನ್ನು ತಿಳಿದುಕೊಂಡು ಅದಕ್ಕೆ ಸೂಕ್ತ ಪೋಷಕಾಂಶಗಳನ್ನು ನೀಡುವಂತಾಗಲು ಮಣ್ಣು ಪರೀಕ್ಷಾ ಕೇಂದ್ರವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಆರಂಭಿಸಲಾಗಿದೆ.
ಕಬ್ಬು ಬೆಳೆಗಾರರು ತಮ್ಮ ಜಮೀನಿನ ಸ್ಥಿತಿ-ಗತಿಯನ್ನು ತಿಳಿದುಕೊಂಡು, ಮಣ್ಣು ಪರೀಕ್ಷೆ ಮಾಡಿಕೊಂಡು ಅಲ್ಲಿ ಕೊರತೆಯಿರುವ ಅಂಶಗಳನ್ನು ಸೇರಿಸಿ ಕಡಿಮೆ ನೀರಿನಲ್ಲಿ ಹೆಚ್ಚಿನ ಫಸಲು ಬೆಳೆಸಲು ವಿಶೇಷ ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಸಾಂಪ್ರದಾಯಿಕವಾಗಿ ಪಾಲಿಸುತ್ತಾ ಬಂದಿರುವ ‘ಸಾಲುನೆಡು’ ಪದ್ಧತಿಗಿಂತ ‘ಫೆಡ್ರೋ ಸಿಸ್ಟಮ್’ ಮೊದಲಾದ ಹೊಸ ಪದ್ಧತಿಗಳನ್ನು ಕಲಿತು ಪಾಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ವಿಭಾಗವು ಸಹ ಕಾರ್ಯ ನಿರತವಾಗಿದ್ದು, ಕಡಿಮೆ ಹಿಡುವಳಿಯಲ್ಲಿ ಹೆಚ್ಚು ಫಸಲು ಬರುವಂತಾಗಲು ಮಾಡಬೇಕಾದ ಕಾರ್ಯಗಳ ಬಗ್ಗೆ ರೈತರಿಗೆ ಇನ್ನು ಹೆಚ್ಚು ತಿಳುವಳಿಕೆ ನೀಡುವ ಅಗತ್ಯವಿದೆ.

 

loading...