ಏರಟೆಲ್ ನೆಟ್‍ವರ್ಕ ಸ್ಥಗಿತ: ಗ್ರಾಹಕರ ಪರದಾಟ

0
8
loading...

ಮುಂಡಗೋಡ: ಎಲ್ಲ ನೆಟ್‍ವರ್ಕಗಳಲ್ಲಿ ಅತ್ಯಂತ ಒಳ್ಳೆಯ ನೆಟ್‍ವರ್ಕ ಸೇವೆಯನ್ನು ನೀಡುತ್ತಿದ್ದ ಭಾರತೀಯ ಏರಟೆಲ್ ನೆಟ್‍ವರ್ಕ ಕಳೆದ ಐದಾರು ತಿಂಗಳಿಂದ ಮುಂಡಗೋಡ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಸರಿಯಾದ ನೆಟ್‍ವರ್ಕ ಒದಗಿಸದೇ ಇರುವುದರಿಂದ (ಏರಟೆಲ್) ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಉಚಿತ ಕರೆ ಹಾಗೂ ಅತೀ ಕಡಿಮೆ ಬೆಲೆಗೆ ಡಾಟಾ ಸೇವೆಯನ್ನು ಒದಗಿಸುವ ಮೂಲಕ ಭರ್ಜರಿ ಎಂಟ್ರಿ ಪಡೆದುಕೊಂಡ ಜಿಯೋ ನೆಟ್‍ವರ್ಕನ ಸವಾಲನ್ನು ಎದುರಿಸಲು ಸಾಧ್ಯವಾಗದೇ ವಿವಿಧ ಮೊಬೈಲ್ ಸೇವಾ ಕಂಪನಿಗಳು ಬದಿಗೆ ಸರಿದದ್ದನ್ನು ಕಂಡಿದ್ದೇವೆ. ಈಗ ಇದೇ ಸಾಲಿಗೆ ಇದುವರೆಗೆ ಜಿಯೋಗೆ ತಕ್ಕ ಪೈಪೋಟಿ ನೀಡುತ್ತಿದ್ದ ಏರಟೆಲ್ ನೆಟ್‍ವರ್ಕ ಕೂಡ ಸೇರುತ್ತದೆ ಎನ್ನುವ ಅನುಮಾನ ಮುಂಡಗೋಡ ಪಟ್ಟಣ ಮತ್ತು ತಾಲೂಕಿನ ಗ್ರಾಮಾಂತರ ಭಾಗದ ಜನರನ್ನು ಕಾಡುತ್ತಿದೆ. ಬಿ.ಎಸ್.ಎನ್.ಎಲ್., ಟಾಟಾ ಇಂಡಿಕಾಂ, ವೊಡಾಫೋನ್, ಐಡಿಯಾ, ಏರ್ಸೆಲ್, ರಿಲಾಯನ್ಸ, ಏರಟೆಲ್ ಹೀಗೆ ಹಲವಾರು ಕಂಪನಿಗಳು ಭಾರತೀಯ ಗ್ರಾಹಕರನ್ನು ತಲುಪಲು ಪ್ರಯತ್ನಿಸಿದರೂ ರಿಲಾಯನ್ಸ ಸಿ.ಡಿ.ಎಮ್, ಬಿ.ಎಸ್.ಎನ್.ಎಲ್. ಹಾಗೂ ಏರಟೆಲ್ ಮಾತ್ರ ಅತೀ ಹೆಚ್ಚು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. ಈ ಕಂಪನಿಯ ನೆಟ್‍ವರ್ಕಗಳು ಗ್ರಾಮೀಣ ಭಾಗದ ಗುಡ್ಡ ಗಾಡು ಪ್ರದೇಶಗಳಲ್ಲಿಯೂ ಸಿಗುತ್ತದೆ ಎನ್ನುವುದೇ ಸ್ಪಷ್ಟವಾದ ಕಾರಣವಾಗಿತ್ತು. ಕ್ರಮೇಣ ಬಿ.ಎಸ್.ಎನ್.ಎಲ್. ಸಂಜೆಯಾಗುತ್ತಲೇ ನೆಟ್‍ವರ್ಕ ಜಾಮ್ ಎನ್ನುವ ಆರೋಪಗಳು ಎಲ್ಲೆಡೆ ವ್ಯಕ್ತವಾಗತೊಡಗಿತ್ತು. ಪರಿಣಾಮ ಡ್ಯೂಯೆಲ್ ಸಿಮ್ ಹ್ಯಾಂಡಸೆಟ್‍ಗಳು ಮಾರುಕಟ್ಟೆಗೆ ಬಂದಾಗ ಇದೊಂದು ಜೊತೆಗಿರಲಿ ಎಂದು ಇಟ್ಟುಕೊಂಡವರು ಹೆಚ್ಚೇ ವಿನಃ ಬಳಕೆಗೆ ಅವಶ್ಯ ಎಂದಲ್ಲ. ಇನ್ನು ರಿಲಾಯನ್ಸ ಸಿಡಿಎಂ ಯಾವ ಪ್ರದೇಶಕ್ಕೆ ಹೋದರೂ ಸಿಗ್ನಲ್ ಸಮಸ್ಯೆಯಿಲ್ಲ ಎನ್ನುವಷ್ಟು ಜನರ ವಿಶ್ವಾಸಕ್ಕೆ ಪಾತ್ರವಾಗಿ ಎಲ್ಲರೂ ಅದರ ಗ್ರಾಹಕರಾದರು. ಆದರೆ ಇಂದು ಸಿಡಿಎಮ್ ಹ್ಯಾಂಡಸೆಟ್‍ಗಳು ನೆನಪಾಗಿ ಮಾತ್ರ ಉಳಿದುಕೊಂಡಿದೆ. ಆದರೆ ಪ್ರಾರಂಭದಿಂದಲೂ ಜನರ ನಂಬಿಕೆ ವಿಶ್ವಾಸಾರ್ಹ ಮೊಬೈಲ್ ಸೇವಾ ಸಂಸ್ಥೆಯಾಗಿ ಪರಿಚಯಿಸಿಕೊಂಡು ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿದ್ದ ಏರಟೆಲ್ ಕೂಡ ಇತ್ತೀಚೆಗೆ ಯಾಕೋ ಮಂಕಾದಂತೆ ಕಾಣಿಸತೊಡಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಿನವರ ಬಳಕೆಯ ನೆಟ್‍ವರ್ಕ ಎನಿಸಿರುವ ಏರಟೆಲ್ ತನ್ನ ಗ್ರಾಹಕರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಕಳೆದ ಒಂದು ವರ್ಷದಿಂದ ದೇಶದಲ್ಲಿ ಜಿಯೋ ನೆಟ್‍ವರ್ಕ ಪ್ರಾಬಲ್ಯ ಮುಂದುವರೆದಿದೆ. ಆದರೆ ನಮ್ಮ ಮುಂಡಗೋಡ ತಾಲೂಕಿಗೆ ಜಿಯೋ ನೆಟ್‍ವರ್ಕ ಬರುವುದು ವಿಳಂಬವಾಗಿದ್ದರಿಂದ ಇಲ್ಲಿಯವರೆಗೂ ಉತ್ತಮ ಎನಿಸಿಕೊಂಡ ಏರಟೆಲ್ ನೆಟ್‍ವರ್ಕಗೆ ಶರಣಾಗಿದ್ದರು. ಈಗಾಗಲೇ ಮುಂಡಗೋಡ ಪಟ್ಟಣದ ವ್ಯಾಪ್ತಿಗೆ ಜಿಯೋ ಬಂದಾಗಿನಿಂದ ಶಾಶ್ವತ ನಂಬರ ಆಗಿ ಏರಟೆಲನ್ನು ಉಳಿಸಿಕೊಂಡು ಕೆಲವು ಡಾಟಾ ಸೇವೆಗಳಿಗಾಗಿ ಜಿಯೋಗೆ ಮೊರೆ ಹೋಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲ ತಿಂಗಳಿಂದ ಏರಟೆಲ್ ಸಿಗ್ನಲ್ ಬಹಳ ಕ್ಷೀಣಿಸಿದ್ದು ಬಳಕೆದಾರರು ಪರದಾಡುವಂತಾಗಿದೆ.

ಉಮೇಶ ಜೋರಾಪುರ(ಏರಟೆಲ್ ಗ್ರಾಹಕ) ಹೇಳಿಕೆ: ಇತ್ತೀಚಿನ ದಿನಗಳಲ್ಲಿ ಏರಟೆಲ್ ಸಿಗ್ನಲ್ ಸಮಸ್ಯೆಯಿಂದಾಗಿ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಇದರಿಂದ ತುರ್ತು ಸಮಯದಲ್ಲಿ ಸಂಬಂಧಪಟ್ಟವರನ್ನು ಸಂಪರ್ಕಿಸಲು ಅಸಾಧ್ಯವಾಗುತ್ತಿದೆ ಹಾಗೂ ಬೇರೆಯವರು ನಮಗೆ ಕರೆ ಮಾಡಿದಾಗ ಅವರ ಮಾಡಿದ ಕರೆಗಳು ನಮ್ಮ ಬದಲಾಗಿ ಬೇರೆಯವರಿಗೆ ಹೋಗುತ್ತಿವೆ. ಕೆಲ ಸಂದರ್ಭಗಳಲ್ಲಿ ಬೇಕಂತಲೇ ನಾಟ್ ರೀಚೆಬಲ್ ಮಾಡಿಕೊಂಡಿದ್ದಾರೆ ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಡುವಂತಾಗಿದೆ. ಒಟ್ಟಿನಲ್ಲಿ ಏರಟೆಲ್ ಗಾಹಕರು ಸಿಗ್ನಲ್ ಸಮಸ್ಯೆ ಬಗೆ ಹರಿದರೆ ಸಾಕು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

loading...