ಕಳೆದ ಬಾರಿಗಿಂತ ಸುಮಾರು ಶೇ. 03 ರಷ್ಟು ಮತದಾನ ಏರಿಕೆ

0
10
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಮತದಾರರಲ್ಲಿ ಜಾಗೃತಿ ಮೂಡಿಸಿ, ಅವರನ್ನು ಮತಗಟ್ಟೆಯತ್ತ ಹೆಜ್ಜೆ ಹಾಕುವಂತೆ ಮಾಡುವಲ್ಲಿ ಸ್ವೀಪ್ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ ದಾಖಲೆಯ 76. 07 ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಸುಮಾರು ಶೇ. 03 ರಷ್ಟು ಏರಿಕೆ ದಾಖಲಾಗಿದೆ.

ಮತದಾರರನ್ನು ಜಾಗೃತಗೊಳಿಸಿ, ಮತದಾನಕ್ಕೆ ಅವರನ್ನು ಪ್ರೇರೇಪಿಸುವಂತೆ ಮಾಡಲು ಚುನಾವಣಾ ಆಯೋಗ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್) ಕಾರ್ಯಕ್ರಮವನ್ನು ರೂಪಿಸಿ, ಜಿಲ್ಲೆಯಲ್ಲಿ ಜಾರಿಗೊಳಿಸಿದೆ.
ಮೇ. 12 ರಂದು ಕೊಪ್ಪಳ ಜಿಲ್ಲೆಯಾದ್ಯಂತ ಜರುಗಿದ ಮತದಾನ ಪ್ರಕ್ರಿಯೆಯಲ್ಲಿ, ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆ ಶೇ. 76. 07 ರಷ್ಟು ಮತದಾನ ದಾಖಲಿಸಿ, ಅಗ್ರ ಸ್ಥಾನದಲ್ಲಿದೆ. ಕುಷ್ಟಗಿ ಕ್ಷೇತ್ರದಲ್ಲಿ ಈ ಬಾರಿ ಶೇ. 73.23 ರಷ್ಟು ಮತದಾನವಾಗಿದ್ದು, ಕಳೆದ 2013 ರ ಚುನಾವಣೆಯಲ್ಲಿ ಶೇ. 71. 33 ರಷ್ಟಾಗಿತ್ತು. ಈ ಬಾರಿಯ ಮತದಾನದಲ್ಲಿ ಶೇ. 02 ರಷ್ಟು ಏರಿಕೆಯಾಗಿದೆ. ಕನಕಗಿರಿ ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಮತದಾನ ದಾಖಲಾಗಿದ್ದು ಶೇ. 78. 95 ರಷ್ಟು ಮತದಾನವಾಗಿದೆ. ಕಳೆದ ಚುನಾವಣೆಯಲ್ಲಿ ಶೇ. 73. 25 ರಷ್ಟು ಮತದಾನವಾಗಿತ್ತು. ಇದರಿಂದಾಗಿ ಈ ಕ್ಷೇತ್ರದಲ್ಲಿ ಸುಮಾರು ಶೇ. 05 ರಷ್ಟು ಮತದಾನ ಏರಿಕೆಯಾಗಿದೆ. ಗಂಗಾವತಿ ಕ್ಷೇತ್ರದಲ್ಲಿ ಈ ಬಾರಿ ಶೇ. 75. 32 ಮತದಾನವಾಗಿದ್ದು, ಕಳೆದ ಬಾರಿ ಶೇ. 73. 75 ರಷ್ಟಾಗಿತ್ತು. ಇಲ್ಲಿ ಶೇ. 02 ರಷ್ಟು ಏರಿಕೆಯಾಗಿದೆ.

ಯಲಬುರ್ಗಾ ಕ್ಷೇತ್ರದಲ್ಲಿ ಈ ಸಲ ಶೇ. 78. 71 ರಷ್ಟು ಮತದಾನವಾಗಿದ್ದು, ಕಳೆದ ಬಾರಿ ಶೇ. 75. 53 ರಷ್ಟು ಮತದಾನವಾಗಿತ್ತು. ಇಲ್ಲಿ ಶೇ. 3 ರಷ್ಟು ಏರಿಕೆ ಕಂಡಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ. 74. 13 ರಷ್ಟು ಮತದಾನವಾಗಿದ್ದು, ಕಳೆದ ಬಾರಿ ಶೇ. 73. 77 ರಷ್ಟಾಗಿತ್ತು. ಇಲ್ಲಿ ಶೇ. 01 ರಷ್ಟು ಮಾತ್ರ ಏರಿಕೆ ಕಂಡಿದೆ. ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು, ಚುನಾವಣಾ ಆಯೋಗದ ಸೂಚನೆಯಂತೆ ಮತದಾರರನ್ನು ಜಾಗೃತಗೊಳಿಸಲು ಜಿಲ್ಲಾ ಕೇಂದ್ರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಹಲವು ಬಗೆಯ ಸ್ವೀಪ್ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು, ವಿಕಲಚೇತನರನ್ನು ಮತದಾನದ ಮುಖ್ಯ ವಾಹಿನಗೆ ತರಲು ಈ ಬಾರಿ ವಿಕಲಚೇತನ ಸ್ನೇಹಿ ಮತಗಟ್ಟೆಗಳನ್ನು ನಿರ್ಮಿಸಲಾಯಿತು.
ವೀಲ್ ಚೇರ್ ವ್ಯವಸ್ಥೆಗೊಳಿಸಲಾಗಿತ್ತು. ಜಿಲ್ಲೆಗೆ ಪ್ರತ್ಯೇಕವಾಗಿ ಜಿಲ್ಲೆಯಲ್ಲಿ ಕಂಡುಬರುವ ಚಿರತೆಯನ್ನೊಳಗೊಂಡ ‘ವೋಟರ್ ಕುಮಾರ’ ಲಾಂಛನವನ್ನು ಸಿದ್ಧಪಡಿಸಿ, ಆಯೋಗದಿಂದ ಅನುಮೋದನೆ ಪಡೆದು, ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿತ್ತು. ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಮತಯಂತ್ರದ ಬಳಕೆ ಹಾಗೂ ವಿವಿ ಪ್ಯಾಟ್ ಮತಖಾತ್ರಿ ಯಂತ್ರದ ಬಳಕೆ ಕುರಿತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ, ಜನರಲ್ಲಿ ನೈತಿಕ ಮತದಾನಕ್ಕೆ ಪ್ರೇರೇಪಿಸಲಾಯಿತು.


ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ ಅವರನ್ನು ಜಿಲ್ಲೆಯ ಮತದಾರರ ಜಾಗೃತಿಗೆ ಐಕಾನ್ ಆಗಿ ನೇಮಿಸಿ, ಅವರ ವಿಶೇಷ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ಹಲವೆಡೆ ಬೈಕ್ ರ್ಯಾಲಿಗಳನ್ನು ಆಯೋಜಿಸಿ ಜನರಲ್ಲಿ ಮತದಾನದ ಜಾಗೃತಿ ಕೈಗೊಳ್ಳಲಾಗಿತ್ತು. ಕೊಪ್ಪಳ ಜಿಲ್ಲೆಯಲ್ಲಿ ಶೇ. 80 ಕ್ಕಿಂತ ಹೆಚ್ಚು ಮತದಾನ ದಾಖಲಾಗುವ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದಾಗ್ಯೂ ಜಿಲ್ಲೆಯಲ್ಲಿ 76. 07 ರಷ್ಟು ಉತ್ತಮ ಮತದಾನ ದಾಖಲಾಗಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯನ್ನಿಟ್ಟು, ತಪ್ಪದೆ ಮತದಾನ ಮಾಡಲು ಮುಂದಾಗಬೇಕು.

ವೆಂಕಟ್ ರಾಜಾ, ಜಿ.ಪಂ ಸಿಇಒ

loading...