ಕಷ್ಟಪಟ್ಟರೆ ಯಶಸ್ಸು ಸಾಧ್ಯ: ಪ್ರೊ.ಎಲ್‌.ಆರ್‌. ನಾಯಕ್‌

0
14
loading...

ವಿಜಯಪುರ: ಸಮಾಜದಲ್ಲಿ ಒಳ್ಳೆಯ ಮಾತುಗಾರ, ಕಲೆಗಾರ, ವಿನ್ಯಾಸಗಾರ, ಛಾಯಾಗ್ರಾಹಕ ಆಗುವುದು ತುಂಬಾ ಕಷ್ಟ. ಆದರೆ ಕಷ್ಟಪಟ್ಟು ಮುಂದೆ ಬಂದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ಕುಲಸಚಿವ ಪ್ರೊ.ಎಲ್‌.ಆರ್‌. ನಾಯಕ್‌ ಹೇಳಿದರು.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಜ್ಞಾನಶಕ್ತಿ ಆವರಣದ ಪ.ಜಾ-ಪ.ಪಂ. ಘಟಕ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಇವರ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡ ಮುದ್ರಣ ವಿನ್ಯಾಸ ಮತ್ತು ಕಲಾಕೃತಿ ಕುರಿತ 10 ದಿನದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿನಿಯರು ವಿವಿಧ ಸಾಫ್ಟ್‌ವೇರ್‌ಗಳನ್ನು ಕಲಿತುಕೊಂಡು ತಮ್ಮ ಶಿಕ್ಷಣಕ್ಕೆ ಬೇಕಾದ ಹಣದ ಅಗತ್ಯತೆಯನ್ನು ತಾವೇ ದುಡಿದು ತಂದೆ-ತಾಯಿ, ಗಂಡನ ಆರ್ಥಿಕ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ದಿಲಾವರ ರಾಮದುರ್ಗ ಮಾತನಾಡಿ, ನಮ್ಮೊಳಗೆ ಇರುವ ಶಕ್ತಿ-ಸಾಮರ್ಥ್ಯವನ್ನು ನಾವು ಅರಿತುಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ನಿಮ್ಮೊಳಗಿರುವ ಶಕ್ತಿ-ಸಾಮರ್ಥ್ಯವನ್ನು ಹೊರಹಾಕುವಲ್ಲಿ ಇಂತಹ ಕಾರ್ಯಾಗಾರಗಳು ನೆರವಾಗುತ್ತವೆ ಎಂದರು.
ಈ ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿವಿಧ ವಿಭಾಗದ ಎಸ್‌.ಸಿ./ಎಸ್‌.ಟಿ. ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಜ್ಯೋತಿ ಕಿಂಗಾರ ಪ್ರಾರ್ಥಿಸಿದರು. ಶಿಕ್ಷಣ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಸುಷ್ಮಲತಾ ಸ್ವಾಗತಿಸಿದರು. ಶಿಕ್ಷಣ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಅಂಬಿಕಾ ಕಟ್ಟಿಮನಿ ವಂದಿಸಿದರು. ಶಿಕ್ಷಣ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಸೌಮ್ಯಶ್ರೀ ನಿರೂಪಿಸಿದರು.

loading...