ಕಾಂಗ್ರೆಸ್‌ ಮುಸ್ಲಿಂರನ್ನು ವೋಟ್‌ಬ್ಯಾಂಕ್‌ಗೆ ಬಳಸಿಕೊಳ್ಳುತ್ತಿದೆ

0
8
loading...

ಕನ್ನಡಮ್ಮ ಸುದ್ದಿ-ಗುಳೇದಗುಡ್ಡ: ಕಳೆದ 70 ವರ್ಷಗಳಿಂದ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಮುಸ್ಲಿಂರನ್ನು ಕೇವಲ ವೋಟ್‌ ಬ್ಯಾಂಕ್‌ನಂತೆ ಬಳಸಿಕೊಳ್ಳುತ್ತಿದೆ. ಮುಸ್ಲಿಂರ ಅಭಿವೃದ್ಧಿಯಾಗಲಿ, ಏಳಿಗೆಯಾಗಲಿ ಅದಕ್ಕೆ ಬೇಕಾಗಿಲ್ಲ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕಾಗಿ ಮುಸ್ಲಿಂರ ಬೆನ್ನಿಗೆ ಚೂರಿಹಾಕುತ್ತ ಬಂದಿದೆ ಎಂದು ಜೆಡಿಎಸ್‌ನ ರಾಜ್ಯ ಮಹಿಳಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಶಹೀನ್‌ ಕೌಸರ್‌ ಹೇಳಿದರು.
ಅವರು ನಗರದ ಗುಲಾಬ್‌ ಚಿತ್ರಮಂದಿರದಲ್ಲಿ ಜೆಡಿಎಸ್‌ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿ, ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ಪಡೆಯಬಾರದು, ಅವರು ವಿದ್ಯಾವಂತರಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಾದಿಭಾಗ್ಯ ಜಾರಿಗೆ ಮಾಡಿದೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಭಯದಿಂದ ಬನಶಂಕರಿಗೆ ಬಂದಿದ್ದಾರೆ. ಅವರು ಬಾದಾಮಿ ಅಭಿವೃದ್ಧಿಯ ಯೋಜನೆ ಇಟ್ಟುಕೊಂಡು ಇಲ್ಲಿಗೆ ಬಂದಿಲ್ಲ. ಕೇವಲ ತಮ್ಮ ಜಾತಿಯ ಮತಗಳ ಲೆಕ್ಕಾಚಾರದಲ್ಲಿ ಇಲ್ಲಿಂದ ಗೆದ್ದುಹೋಗುವುದಕ್ಕಾಗಿ ಬಂದಿದ್ದಾರೆ. ಅಧಿಕಾರದಲ್ಲಿದ್ದಾಗ ಬಾದಾಮಿ ಅಭಿವೃದ್ದಿಯ ನೆನಪಾಗದ ಸಿಎಂಗೆ ಈಗ ಬಾದಾಮಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಸಿದ್ದರಾಮಯ್ಯನವರನ್ನು ಸೋಲಿಸಲು ಬಾದಾಮಿಗೆ ಬಂದಿದ್ದಾರೆ. ಈ ಇಬ್ಬರಿಗೂ ಬಾದಾಮಿಯ ಬಗ್ಗೆ ಕಾಳಜಿಇಲ್ಲ. ಈ ಮನೆಯ ಮಗನಾದ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಹನಮಂತ ಮಾವಿನಮರದ ಅವರು ಬಾದಾಮಿ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದು. ಮನೆಯ ಮಗನನ್ನು ಗೆಲ್ಲಿಸಿ ಎಂದರು.
ಜೆಡಿಎಸ್‌ ಅಭ್ಯರ್ಥಿ ಹನಮಂತ ಮಾವಿನಮರದ ಮಾತನಾಡಿ, ನಾನು ನಿಮ್ಮ ಮನೆಯ ಮಗ. ನನಗೆ ಈ ಬಾರಿ ಒಂದು ಅವಕಾಶ ನೀಡಿ, ಬಾದಾಮಿ ಕ್ಷೇತ್ರವನ್ನು ಸರ್ವತೋಮುಖ ಅಭಿವೃದ್ಧಿ ಪಡಿಸುವೆ. ಇಲ್ಲಿನ ನೇಕಾರರ, ರೈತರ, ಕೂಲಿಕಾರ್ಮಿಕರ ಅಭಿವೃದ್ಧಿಗೆ ಯೋಜನೆಗಳನ್ನು ತರುತ್ತೇನೆ ಎಂದರು.
ವೇದಿಕೆಯ ಮೇಲೆ ನೇಕಾರಘಟಕದ ಕಾರ್ಯದರ್ಶಿ ಚಂದ್ರಕಾಂತ ಶೇಖಾ, ಮಹಿಳಾಅಧ್ಯಕ್ಷೆ ಭುವನೇಶ್ವರಿ ಹಾದಿಮನಿ, ಅನ್ವರಖಾನ ಪಠಾಣ, ಗೌಸ ಬಾಗವಾನ, ಜಹಾಂಗೀರ ಕಮಾನಗಾರ, ರಜಾಕ್‌ ಕುದರಿ, ಬಾಷಾ ಸಾಧನಿ, ಸಿಕಂದರ್‌ ಖಾಜಿ, ರಾಜೇಸಾಬ ಪೆಂಡಾರಿ, ಮಶಾಕ್‌ ನಲವತವಾಡ, ಹುಸೇನಸಾಬ ಯಾದಗಿರಿ ಮತ್ತಿತರರು ಇದ್ದರು.

loading...