ಕಾರ್ಯಕರ್ತರು ದೃತಿಗೆಡದಿರಿ: ಸುನೀಲ ಹೆಗಡೆ ಕರೆ

0
25
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ ನೈತಿಕ ಗೆಲುವನ್ನು ಸಾಧಿಸಿದೆ. ಅಲ್ಪ ಮತಗಳ ಅಂತರದಿಂದ ಪಕ್ಷ ಸೋತಿದ್ದರೂ, ಕ್ಷೇತ್ರದಲ್ಲಿ ಬಿಜೆಪಿ ಹಿಂದೆಂದಿಗಂತಲೂ ಸದೃಢಗೊಂಡಿದೆ. ಕಾರ್ಯಕರ್ತರ ಹಾಗೂ ಪಕ್ಷದ ಮುಖಂಡರುಗಳ ಅವಿರತ ಶ್ರಮ ಶ್ಲಾಘನೀಯ. ಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಲು ಪಣತೊಡುವುದರ ಮೂಲಕ ಪ್ರಧಾನಿ ಮೋಧಿಯವರ ಕೈ ಬಲಪಡಿಸಲು ಸನ್ನಧ್ದರಾಗಬೇಕು. ಪಕ್ಷದ ಸೋಲಿನಿಂದ ಕಾರ್ಯಕರ್ತರು ದೃತಿಗೇಡದಿರಿ. ಕ್ಷೇತ್ರದ ಜನಸಾಮಾನ್ಯರ ನೋವು ನಲಿವುಗಳಿಗೆ ಧ್ವನಿಯಾಗಿ ಯಾವತ್ತು ಇರುತ್ತೇನೆಂದು ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು.
ಅವರು ಭಾನುವಾರ ರಾತ್ರಿ ನಗರದ ಅಂಬೇಡ್ಕರ್ ಭವನದಲ್ಲಿ ಚುನಾವಣೆಯಲ್ಲಿ ದುಡಿದ ಪಕ್ಷದ ಕಾರ್ಯಕರ್ತರುಗಳಿಗೆ, ಮುಖಂಡರುಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಳೆದ 40 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ದೇಶಪಾಂಡೆಯವರಿಗೆ ನಮಗಿಂತ ಶೇ:2 ರಷ್ಟೆ ಮತ ಬಿದ್ದಿದೆ. ನಾವು ಪ್ರಾಮಾಣಿಕ ಮಾರ್ಗದ ಮೂಲಕ ಮತಯಾಚನೆ ಮಾಡಿದ್ದೇವೆ ಎಂಬ ಹೆಮ್ಮೆ ನಮಗಿದೆ. ಮುಂಬರುವ ದಿನಗಳಲ್ಲಿ ನಗರ ಸಭೆ ಹಾಗೂ ಲೋಕ ಸಭಾ ಚುನಾವಣೆ ಬರಲಿದ್ದು, ದಾಂಡೇಲಿ ನಗರ ಸಭೆಯಲ್ಲಿ ಈ ಭಾರಿ ಬಿಜೆಪಿ ಎಂಬ ಘೋಷ ವಾಕ್ಯದೊಂದಿಗೆ ನಗರ ಸಭೆಯಲ್ಲಿ ಕಮಲವನ್ನು ಅರಳಿಸಲು ಒಂದಾಗಿ ಶ್ರಮಿಸಬೇಕು. ಅದರ ನಂತರದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿಯೂ ಪ್ರಧಾನಿ ಮೋಧಿಯವರ ಕೈ ಬಲಪಡಿಸಲು ನಿರೀಕ್ಷೆಗೂ ಮೀರಿ ಶ್ರಮಿಸಬೇಕೆಂದ ಅವರು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರುಗಳು ಎದೆಗುಂದದೆ ಪಕ್ಷ ಕಟ್ಟಲು ಅಣಿಯಾಗಬೇಕು. ಕಾರ್ಯಕರ್ತರುಗಳ ಶಕ್ತಿ ತುಂಬುವ ಕೆಲಸವನ್ನು ನಾನು ಸೇರಿ ಪಕ್ಷದ ಮುಖಂಡರು ಮಾಡಲಿದ್ದಾರೆಂದು ಸುನೀಲ ಹೆಗಡೆ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆ.ಡಿ.ಎಸ್ ಪಕ್ಷ ಆಡಳಿತ ನಡೆಸುತ್ತಿದೆ. ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಲಾಗಿದೆ. ಈಗಿನ ರಾಜ್ಯ ಸರಕಾರಕ್ಕೆ ಭವಿಷ್ಯವಿಲ್ಲ. ಸ್ವಲ್ಪ ಸಮಯದಲ್ಲೆ ಸರಕಾರ ಬೀಳುವ ಸಾಧ್ಯತೆಯಿದ್ದು, ಕಾರ್ಯಕರ್ತರು ಸನ್ನದ್ದರಾಗಬೇಕೆಂದು ಕರೆ ನೀಡಿ, ಪಕ್ಷದ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರುಗಳಿಗೆ, ಮುಖಂಡರುಗಳಿಗೆ ಮತ್ತು ಮತ ನೀಡಿದ ಮತದಾರ ಬಾಂಧವರಿಗೆ ಸುನೀಲ ಹೆಗಡೆಯವರು ಕೃತಜ್ಞತೆ ಸಲ್ಲಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ನಗರ ಘಟಕ ಅಧ್ಯಕ್ಷ ಬಸವರಾಜ ಕಲಶೆಟ್ಟಿಯವರು ನಗರದ ಕೆಲವೊಂದು ವಾರ್ಡ್‍ಗಳಲ್ಲಿ ನಿರೀಕ್ಷೆಗಿಂದ ಕಡಿಮೆ ಮತಗಳು ಬಿದ್ದಿವೆ. ಈ ಬಗ್ಗೆ ಚಿಂತನೆಯಾಗಬೇಕು. ಭವಿಷ್ಯದಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಪಕ್ಷದ ಕಾರ್ಮಿಕ ಪ್ರಕೊಷ್ಟದ ಜಿಲ್ಲಾ ಸಂಚಾಲಕ ರೋಶನ್ ನೇತ್ರಾವಳಿ, ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ ವಹಾಬ ಬಾನ್ಸಾರಿ, ನಗರ ಸಭಾ ಸದಸ್ಯರುಗಳಾದ ರವಿ ಸುತಾರ್, ಮುಸ್ತಾಕ ಶೇಖ, ಶಿರಸಿ ಅರ್ಬನ್ ಬ್ಯಾಂಕಿನ ನಿರ್ದೇಶಕ ಟಿ.ಎಸ್.ಬಾಲಮಣಿ, ಪಕ್ಷದ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸುಭಾಸ ಅರವೇಕರ, ಮಹಿಳಾ ಘಟಕದ ಅಧ್ಯಕ್ಷೆ ದೇವಕ್ಕ ಕೆರೆಮನಿ, ಹಳಿಯಾಳದ ಮುಖಂಡ ಶೆಟ್ಟೆನ್ನವರ, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪಾಟೀಲ, ಎಸ್.ಸಿ ಮೋರ್ಚಾದ ಅಧ್ಯಕ್ಷ ದಶರಥ ಬಂಡಿವಡ್ಡರ ಮೊದಲಾದವರು ಉಪಸ್ಥಿತರಿದ್ದರು. ಬಸವರಾಜ ಕಲಶೆಟ್ಟಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡ ಚಂದ್ರಕಾಂತ ಕ್ಷೀರಸಾಗರ ವಂದಿಸಿದರು. ಪಕ್ಷದ ಹಿಂದುಳಿದ ವಿಭಾಗದ ಅಧ್ಯಕ್ಷ ಗುರು ಮಠಪತಿ ಕಾರ್ಯಕ್ರಮ ನಿರೂಪಿಸಿದರು.

loading...