ಕಾಳಿನದಿ ನೀರಾವರಿ ಯೋಜನೆ: ನಡೆದಿರುವ ಪೈಪ್ ತಯಾರಿಕೆ ಕಾಮಗಾರಿ

0
16
loading...

ನಾಗರಾಜ ಪ ಶಹಾಪುರಕರ

ಕನ್ನಡಮ್ಮ ಸುದ್ದಿ-ಹಳಿಯಾಳ: ತಾಲೂಕಿನ ಕೃಷಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿ ತನ್ಮೂಲಕ ಸಮಗ್ರ ಅಭಿವೃದ್ದಿಗೆ ಯೋಗದಾನ ನೀಡಲಿರುವ ಕಾಳಿನದಿ ನೀರಾವರಿ ಯೋಜನೆಯಡಿ ಪೈಪ್ ತಯಾರಿಕೆ ಕಾಮಗಾರಿ ಮುಂದುವರಿದಿದೆ.
ದಾಂಡೇಲಿಯಲ್ಲಿ ಹರಿದು ಹೋಗಿರುವ ಕಾಳಿನದಿಯಿಂದ ನೀರನ್ನೆತ್ತಿ ಅದನ್ನು ಕೊಳವೆ ಮಾರ್ಗದ ಮೂಲಕ ಸಾಗಿಸಿ ತಾಲೂಕಿನ 46 ಕೆರೆಗಳು ಹಾಗೂ 19 ಬಾಂದಾರುಗಳಲ್ಲಿ ತುಂಬಿಸಿ ತನ್ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವ ಮತ್ತು ತಾಲೂಕಿನ 17 ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿಗೆ ನೀರು ನೀಡುವ ಈ ಯೋಜನೆಯ ಮಹತ್ವಪೂರ್ಣ ಭಾಗವಾದ ಪೈಪ್ ತಯಾರಿಕೆ ಕಾಮಗಾರಿಯು ಹಳಿಯಾಳ ಪಟ್ಟಣಕ್ಕೆ ಲಗತ್ತಾಗಿರುವ ಕೃಷಿ ಜಮೀನಿನ ತೆರೆದ ಕಾರ್ಯಾಗರದಲ್ಲಿ ನಡೆಯುತ್ತಿದೆ. ಅಲ್ಲಿ ಗುತ್ತಿಗೆ ಎಜನ್ಸಿಯ ಇಂಜಿನಿಯರ್ ಗಳ ಮಾರ್ಗದರ್ಶನದಲ್ಲಿ ಕಾರ್ಮಿಕರು ಯಂತ್ರಗಳನ್ನು ಬಳಸಿ ಎಮ್ ಎಸ್ ಕಬ್ಬಿಣದ ಪ್ಲೇಟ್ ಗಳನ್ನು ಪೈಪ್‍ಗಳನ್ನಾಗಿ ವಿನ್ಯಾಸಗೊಳಿಸುತ್ತಿದ್ದಾರೆ. ಪ್ರತಿ ಪೈಪ್ 33 ಅಡಿ ಉದ್ದ 5 ಕಾಲು ಅಡಿ ವ್ಯಾಸದ ಹೊಂದಿದೆ. ನೀರು ಹಾಗೂ ಮಣ್ಣಿನ ಹೊರ ವಾತಾವರಣಕ್ಕೆ ಪೈಪ್ ತುಕ್ಕು ಹಿಡಿಬಾರದು ಎಂಬ ಉದ್ದೇಶದಿಂದ ಉಭಯ ಕಡೆಗಳಲ್ಲಿ ಸಿಮೆಂಟ್ ಹಾಗೂ ಪ್ಲಾಸ್ಟಿಕ್ ಕೋಟಿಂಗ್ ಸಹ ಮಾಡುವ ಸಿದ್ಧತೆ ನಡೆದಿದೆ. ಈ ಯೋಜನೆಗೆ ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೊದಲ ಬಜೇಟ್‍ನಲ್ಲಿ ಘೋಷಿಸಿ ನಂತರ 220.35 ಕೋಟಿ ರೂ. ಮಂಜೂರಿಗೊಳಿಸಿ ಸರ್ಕಾರದ ಅವಧಿ ಮುಕ್ತಾಯಗೊಳ್ಳುವ ಕೆಲ ತಿಂಗಳ ಹಿಂದೆ ಹಳಿಯಾಳಕ್ಕೆ ಬಂದಿದ್ದಾಗ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು.

ಒಂದೆಡೆ ನೀರಾವರಿ ಯೋಜನೆಗೆ ಮಂಜೂರಾತಿ ಪಡೆಯಲು ಎಲ್ಲ ರೀತಿಯ ಪ್ರಯತ್ನ ನಡೆಸಿದ ಆರ್ ವಿ ದೇಶಪಾಂಡೆಯವರು ಯೋಜನೆಯ ಅಂಗವಾಗಿ ನೀರು ತುಂಬಿಸಿಡಲು ಕೆರೆಗಳನ್ನು ಹೂಳೆತ್ತುವ ಕಾರ್ಯ ಮಾಡಿದರು. ಹಲವಾರು ವರ್ಷಗಳಿಂದ ಕೆರೆಗಳಲ್ಲಿ ತುಂಬಿರುವ ಹೂಳನ್ನು ಯಂತ್ರಗಳ ಮೂಲಕ ತೆರವುಗೊಳಿಸಲು ಸರ್ಕಾರ ಯೋಜನೆ ರೂಪಿಸದೆ ಇದ್ದ ಕಾರಣ ತಮ್ಮ ಪರಿಚಯದ ಉದ್ಯಮಿಗಳ ಸಹಕಾರದಿಂದ ‘ಕೈಗಾರಿಕಾ ಸಾಮಾಜಿಕ ಹೊಣೆಗಾರಿಕೆ ನಿಧಿ'(ಸಿ ಎಸ್ ಆರ್) ಅಡಿ ಜೆಸಿಬಿ, ಹಿಟಾಚಿ ಯಂತ್ರಗಳನ್ನು ಬಳಸಿ ಕೆರೆಗಳಲ್ಲಿನ ಹೂಳನ್ನು ತೆರವುಗೊಳಿಸಿದರು. ಆ ಕೆರೆ ಪಾತ್ರಗಳ ರೈತರು ತಮ್ಮ ಟ್ರ್ಯಾಕ್ಟರ್‍ಗಳಲ್ಲಿ ಹೂಳನ್ನು ತೆಗೆದುಕೊಂಡು ಹೋಗಿ ತಮ್ಮ ಗದ್ದೆಗಳ ಫಲವತ್ತತೆ ಹೆಚ್ಚಿಸಿಕೊಂಡರು. ಕಾಳಿನದಿಯಿಂದ ಕೊಳವೆ ಮಾರ್ಗದ ಮೂಲಕ ಬರುವ ನೀರನ್ನು ಹಿಡಿದಿಟ್ಟುಕೊಳ್ಳಲು ಕೆರೆಗಳಲ್ಲಿನ ಹೂಳು ತೆರವುಗೊಳಿಸಿದ ಕಾರಣ Pರೆಗಳಲ್ಲಿ ನೀರು ಸಂಗ್ರಹಣೆಗೆ ಸಾಕಷ್ಟು ಸ್ಥಳಾವಕಾಶ ಮಾಡಿದಂತಾಗಿದೆ. ಇದು ಮಹತ್ವಪೂರ್ಣ ಕಾರ್ಯವೂ ಹೌದು. ಮುಂದಿನ ದಿನಗಳಲ್ಲಿ ಕೆರೆಗಳ ಏರಿಗಳನ್ನು ಹಾಗೂ ಕಾಲುವೆಗನ್ನು ದುರಸ್ಥಿಗೊಳಿಸುವ ಕಾರ್ಯವನ್ನು ಸಹ ಮಾಡಬೇಕಾಗಿದೆ ಜೊತೆಗೆ ಕಡಿಮೆ ನೀರನ್ನು ಬಳಸಿಕೊಂಡು ಹೆಚ್ಚಿನ ಫಸಲು ಬೆಳೆಸುವ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಬೇಕಾಗಿದೆ. ಕೆರೆ ನೀರಿನ ಆಧಾರದ ಮೇಲೆ ಕೃಷಿ ಚಟುವಟಿಕೆ ಜೊತೆಗೆ ಹೈನುಗಾರಿಕೆ ಮೊದಲಾದ ಹೆಚ್ಚಿನ ಆದಾಯ ತರುವ ಚಟುವಟಿಕೆಗಳನ್ನು ಮಾಡಲು ರೈತರಲ್ಲಿ ಈಗಿನಿಂದಲೇ ತರಬೇತಿ, ಅರಿವು ಕಾಳಿನದಿ ನೀರಾವರಿ ಯೋಜನೆ ಸಂಪೂರ್ಣ ಸದುಪಯೋಗಕ್ಕೆ ಕೃಷಿಕರನ್ನು ಸಜ್ಜುಗೊಳಿಸಬೇಕಾಗಿದೆ.

loading...