ಕುಂದರಗಿ ಜೆಮ್ ಸಕ್ಕರೆ ಕಾರ್ಖಾನೆ ಮುಂದೆ ಪ್ರತಿಭಟನೆ

0
28
loading...

ಬೀಳಗಿ: ತಾಲೂಕಿನ ಕುಂದರಗಿ ಗ್ರಾಮದ ಜೆಮ್ ಸಕ್ಕರೆ ಕಾರ್ಖಾನೆಗೆ 2016-17ನೇ ಸಾಲಿನಲ್ಲಿ ಪೂರೈಸಿದ ಕಬ್ಬಿಗೆ 2ನೇ ಕಂತಿನ ಹಣ 310 ರೂ. ಬಾಕಿ ಕೊಡಬೇಕಾಗಿದ್ದು, ಒಂದು ವರ್ಷ ಕಳೆದು ಹೋದರೂ ರೈತರ ಖಾತೆಗೆ ಹಣ ಜಮಾ ಮಾಡದೆ ಇರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಜೆಮ್ ಸಕ್ಕರೆ ಕಾರ್ಖಾನೆಯ ಮುಂದೆ ಮುಂಜಾನೆಯಿಂದ ಸಂಜೆವರೆಗೆ ಪ್ರತಿಭಟನೆ ನಡೆಸಿದರು.
2017-18ನೇ ಸಾಲಿನಲ್ಲಿ ಪೂರೈಸಿದ ಕಬ್ಬಿಗೆ 2700 ರೂ ಕೊಡಬೇಕಾಗಿತ್ತು, 4 ತಿಂಗಳ ಬಳಿಕ ರೈತರು ಹೋಗಿ ವಿಚಾರಿಸಿದರೆ ಕಾರ್ಖಾನೆ ಅಧಿಕಾರಿಗಳು ಸಕ್ಕರೆ ದರ ಇಳಿಕೆಯಾಗಿರುವುದರಿಂದ ಹಣ ಸಂದಾಯ ಮಾಡಲು ಸಾಧ್ಯವಿಲ್ಲವೆಂದು ಹೇಳಿ, ವಿಳಂಬ ಮಾಡಿದ್ದರಿಂದ ರೊಚ್ಚಿಗೆದ್ದು ಪ್ರತಿಭಟನೆ ಆರಂಭಿಸಿದ್ದರು.

ರೈತರು ಹಣ, ಹೆಂಡ, ಖಂಡದ ಆಮಿಷಗಳಿಗೆ ಬಲಿಬಿದ್ದು ರಾಜಕಾರಣಿಗಳ ಬೆನ್ನು ಹತ್ತದೆ ರೈತ ಕುಲ ಒಂದೇ ಎಂದು ಭಾವಿಸಿ ಒಗ್ಗಟ್ಟಿನಿಂದ ಹೋರಾಟಕ್ಕಿಳಿದರೆ ಬೇಕು ಬೇಡಗಳನ್ನು ಪಡೆದುಕೊಳ್ಳಬವಹುದೆಂದು ಹೇಳಿದರು.
ಕಾರ್ಖಾನೆ ಅಧಿಕಾರಿಗಳು ಮಧ್ಯಾಹ್ನ ಸಂಧಾನಕ್ಕೆ ಆಗಮಿಸಿ ಸಕ್ಕರೆ ಧಾರಣಿ ಕಡಿಮೆಯಾಗಿದ್ದು 2500 ನೂರು ಕೊಡಲು ಆಗುವದಿಲ್ಲ 2000 ಸಾವಿರ ರೂ. ಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದಾಗ, ರೈತರು ರೊಚ್ಚಿಗೆದ್ದು 2500 ರೂ. ಕೊಡುವ ವರೆಗೆ ಹೋರಾಟ ಮುಂದುವರೆಸುತ್ತೇವೆಂದು ಪಟ್ಟು ಹಿಡಿದು ಮುಖ್ಯದ್ವಾರ ಬಂದ್ ಮಾಡಿ ರಸ್ತೆಯಲ್ಲಿಯೇ ಒಲೆ ಹೂಡಿ ಅಡುಗೆ ತಯಾರಿಸಿ ಊಟ ಮಾಡಿದರು.

ಕೊನೆಗೆ ಅಂತಿಮವಾಗಿ ಕಾರ್ಖಾನೆಯ ಅಧಿಕಾರಿಗಳು, ರೈತರ ಮಧ್ಯೆ ರಾಜಿ ಸಂಧಾನ ಜರುಗಿದ್ದರಿಂದ ಕಾರ್ಖಾನೆಯ ಹಿರಿಯ ಪ್ರಬಂಧಕ ರಮೇಶ ಪಾಟೀಲ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜನೇವರಿಯಿಂದ ಸಾಗಿಸಿದ ಕಬ್ಬಿಗೆ 2000 ರೂ.ದರದಂತೆ ಜೂನ್ ಅಂತ್ಯದೊಳಗೆ ಪಾವತಿಸುತ್ತೇವೆ. ನಂತರ ಕಳೆದ ಸಾಲಿನ ಕಬ್ಬಿಗೆ 310 ರೂ ಬಿಲ್ಲು ಜುಲೈ 10 ರೊಳಗೆ ಸಂದಾಯ ಮಾಡುತ್ತೇವೆಂದು ರೈತರಿಗೆ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಕಾರ್ಖಾನೆಯ ಜನರಲ್ ಮ್ಯಾನೇಜರ್ ಎಸ್. ಮೋಹನರಾಜು, ಗಂಗಯ್ಯ ಹಿರೇಮಠ, ಮಲ್ಲು ಹೋಳಿ, ಸಿದ್ದು ಪಾಟೀಲ, ರಾಮನಗೌಡ ಸಣಗೌಡರ, ಹನಮಂತ ಕೆರಕಲಮಟ್ಟಿ, ರಾಜೇಂದ್ರ ಪಾಟೀಲ, ರಮೇಶ ಸುಳ್ಳದ, ಭೀಮಪ್ಪ ತಳಗೇರಿ, ರಾಜು ಕಮ್ಮನ್ನವರ, ಶ್ರೀಶೈಲ ಕೊರ್ತಿ, ಲಕ್ಷ್ಮಣ ಗಾಣಗೇರ, ಲಕ್ಷ್ಮಣ ನಾಯ್ಕರ್, ಮಾರುತಿ ಕಂಬಳಿ, ಮಲ್ಲಪ್ಪ ಹನಮರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

loading...