ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕಿ ರೂಪಾಲಿ

0
20
loading...

ಕನ್ನಡಮ್ಮ ಸುದ್ದಿ-ಕಾರವಾರ: ಭವಿಷ್ಯದಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿದ್ದು, ನನ್ನ ಮೇಲೆ ಭರವಸೆ ಇಟ್ಟು ಮತ ನೀಡಿದ ಜನತೆಯ ಸೇವಕಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ನೂತನ ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಅವರು ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಯುವಜನತೆಯ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡಲಾಗುವುದು. ಹೆಚ್ಚು ಉದ್ಯೋಗ ಸೃಷ್ಠಿಸಲು ಕೈಗಾರಿಕೆಗಳ ಸ್ಥಾಪನೆಗೆ ಮೊದಲ ಆದ್ಯತೆ ನೀಡಲಾಗುವುದು. ಸೀಬರ್ಡ್, ಕೈಗಾದಂತಹ ಯೋಜನೆಗಳಿಂದ ನಿರಾಶ್ರಿತರಾದವರಿಗೆ ಉದ್ಯೋಗ ನೀಡಲು ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಲಾಗುವುದು. ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವ ಮುಂಚೆ ಕೈಗೆತ್ತಿಕೊಳ್ಳಲು ಅಕಾರಿಗಳಿಗೆ ಸೂಚಿಸಲಾಗುವುದು. ಮೆಡಿಕಲ್ ಕಾಲೇಜಿಗೆ ನುರಿತ ತಜ್ಞ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಾರವಾರ ನಗರದ ಮುಖ್ಯ ಜ್ವಲಂತ ಸಮಸ್ಯೆಯಾಗಿರುವ ಕೋಣೆನಾಲಾ ಸಮಸ್ಯೆಯನ್ನು ತನ್ನ ಪ್ರಥಮ ಅನುದಾನದಲ್ಲಿಯೇ ಬಗೆಹರಿಸಲಾಗುವುದು ಎಂದು ಘೋಷಿಸಿದರು.

ಚೆಂಡಿಯಾ ಗ್ರಾಮದ ಜನರ ಆಶೀರ್ವಾದದಿಂದ ರಾಜಕೀಯ ಪ್ರಾರಂಭಿಸಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘಟಾನುಘಟಿಗಳನ್ನು ಎದುರಿಸಲು ಸಾಧ್ಯವೇ ಎಂದು ಕೆಲವರು ಪ್ರಶ್ನಿಸಿದರು. ಬಹಳಷ್ಟು ಜನ ಹೆಣ್ಣು ಮಗಳು ಎಂಬ ಕಾರಣಕ್ಕೆ ಏನೇನು ಕುಹಕದ ಮಾತುಗಳನ್ನಾಡಿದರು. ಆದರೆ ದೇವರನ್ನು ಸಾಕ್ಷಿಯಾಗಿಸಿ ಚುನಾವಣೆ ಎದುರಿಸಿದೆ. ಜನತೆ ಕೈ ಬಿಡಲಿಲ್ಲ. ಕ್ಷೇತ್ರದ ಜನರೊಂದಿಗೆ ಯಾವುದೋ ಜನ್ಮದ ಋಣಾನುಬಂಧ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಮಂತ್ರಿ ಅನಂತ್‍ಕುಮಾರ್ ಹೆಗಡೆಯವರ ಆಶೀರ್ವಾದದಿಂದ ಪಕ್ಷವನ್ನು ಸಂಘಟಿಸಿದ್ದರಿಂದ ಗೆಲುವು ಸಾಧ್ಯವಾಯಿತು. ಜೊತೆಗೆ ಕಾರವಾರ-ಅಂಕೋಲಾ ಕ್ಷೇತ್ರದ ಎಲ್ಲ ಕಾರ್ಯಕರ್ತರು, ಹಿತೈಷಿಗಳು, ಹಿರಿಯ ಮುಖಂಡರ ಪರಿಶ್ರಮದ ಫಲದಿಂದ ಅಭೂತಪೂರ್ವ ಗೆಲುವು ಪಡೆದು ಶಾಸಕಿಯಾಗಿ ವಿಧಾನಸಭೆಗೆ ಆಯ್ಕೆಯಾದೆ. ಕ್ಷೇತ್ರದ ಅಭಿವೃದ್ಧಿಗೋಸ್ಕರ ರಾಜಕೀಯ ದ್ವೇಷ ಬದಿಗಿರಿಸಿ ಎಲ್ಲರಿಂದಲೂ ಸಲಹೆ, ಸೂಚನೆಗಳನ್ನು ಪಡೆಯಲಾಗುವುದು.  ಎಲ್ಲದರಲ್ಲೂ ಬಿಜೆಪಿ ಗೆಲ್ಲಿಸಿ ಬಿಜೆಪಿಮಯಗೊಳಿಸಬೇಕು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾಧರ್ ಭಟ್ಟ, ತಾಲೂಕು ಪಂಚಾಯತ್ ಉಪಾಧ್ಯಕ್ಷ ರವೀಂದ್ರ ಪವಾರ್ ಮಾಜಿ ಕೆಎಫ್‍ಡಿಸಿ ಚೆರ್‍ಮನ್ ರಾಜೇಂದ್ರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ, ಸಂಘಟನಾ ಕಾರ್ಯದರ್ಶಿ ಕೆ.ಎನ್.ಹೆಗಡೆ, ಜಿಲ್ಲಾ ವಕ್ತಾರ ರಾಜೇಶ ನಾಯಕ, ಅರುಣ್ ನಾಡಕರ್ಣಿ, ಭಾಸ್ಕರ್ ನಾರ್ವೇಕರ, ಸುಜಾತಾ ಬಾಂದೇಕರ, ನಯನಾ ನೀಲಾವರ್, ನಗರ ಅಧ್ಯಕ್ಷ ಮನೋಜ್ ಭಟ್ಟ,ಗ್ರಾಮೀಣ ಅಧ್ಯಕ್ಷ ಮಾರುತಿ ನಾಯ್ಕ ಮುಂತಾದವರು ಇದ್ದರು.

loading...