ಖಾನಾಪುರದಲ್ಲಿ ಮಕ್ಕಳ ವಿಶೇಷ ದಾಖಲಾತಿ ಆಂದೋಲನ

0
27
loading...

ಕನ್ನಡಮ್ಮ ಸುದ್ದಿ-ಖಾನಾಪುರ: ಗುಣಾತ್ಮಕ ಶಿಕ್ಷಣದತ್ತ ಮಕ್ಕಳ ಚಿತ್ತ ಯೋಜನೆಯಡಿ ಪಟ್ಟಣದ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ಮಂಗಳವಾರ ಸ್ಥಳೀಯ ಬಿಇಒ ಕಚೇರಿ ಮತ್ತು ಬಿ.ಆರ್.ಸಿ ಕಚೇರಿಗಳು ಸಾರ್ವಜನಿಕರು ಮತ್ತು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಶಾಸಕರ ಮಾದರಿ ಶಾಲೆಯಿಂದ ಪ್ರಾರಂಭಗೊಂಡ ದಾಖಲಾತಿ ಅಭಿಯಾನದ ಜಾಗೃತಿ ರ್ಯಾಲಿ ಪಟ್ಟಣದ ಶಾಹುನಗರ, ಸ್ಟೇಶನ್ ರಸ್ತೆ, ವಿದ್ಯಾನಗರ ಮತ್ತಿತರ ಕಡೆಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಇಲಾಖೆಯಿಂದ ಹೊರತಂದ ಭಿತ್ತಿಪತ್ರ ಮತ್ತು ಮಾಹಿತಿ ಪತ್ರಿಕೆಗಳನ್ನು ಸಾರ್ವಜನಿಕರಿಗೆ ವಿತರಿಸಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಬಿಇಒ ಉಮಾ ಬರಗೇರ 6ರಿಂದ 14 ವಯೋಮಾನದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗಳಿಗೆ ದಾಖಲಿಸುವ ವಿಶೇಷ ದಾಖಲಾತಿ ಆಂದೋಲನವನ್ನು ಸ್ಥಳೀಯ ಶಾಸಕರ ಮಾದರಿ ಶಾಲೆ ಸೇರಿದಂತೆ ತಾಲೂಕಿನ ಇದ್ದಲಹೊಂಡದ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆ ಮತ್ತು ಪ್ರಭುನಗರದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮೇ.31ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬಿ.ಆರ್.ಸಿ ಸಮನ್ವಯ ಅಧಿಕಾರಿ ಸವಿತಾ ಹಲಕಿ ಮಾತನಾಡಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ವಿಶೇಷ ದಾಖಲಾತಿ ಆಂದೋಲನದ ಯಶಸ್ಸಿಗೆ ಸಂಘ ಸಂಸ್ಥೆಗಳು, ಗ್ರಾಮ ಪಂಚಾಯ್ತಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಎನ್.ಜಿ.ಒಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಪ್ರಯತ್ನಿಸಲಾಗುವುದು ಎಂದು ಮಾಹಿತಿ ನೀಡಿದರು.

ಬಿ.ಆರ್.ಪಿ ರಮೇಶ ಪತ್ತಾರ, ಜೆ.ಎ ಚಿಕ್ಕೋಡಿ, ಶಂಕರ ಕಮ್ಮಾರ, ಎಂ.ಬಿ ಗಡಾದ, ಪಿ.ಕೆ ಕಮ್ಮಾರ, ಭರಮಣ್ಣ ತಳವಾರ, ನಾರಾಯಣ ಚಲವಾದಿ ಸೇರಿದಂತೆ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರು, ಸರ್ಕಾರೇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

loading...