ಗಂಗಾವತಿ ಕೋಮು ಗಲಭೆಗಳಿಗೆ ಬಿಜೆಪಿ, ಅನ್ಸಾರಿ ಹೊಣೆ: ರಾಮುಲು

0
24
loading...

ಗಂಗಾವತಿ: ಇತ್ತೀಚಿನ ದಿನಗಳಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರ ಅತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿಕೊಂಡಿದ್ದು ಇಲ್ಲಿ ನಡೆದ ಕೋಮು ಗಲಭೆಗಳಿಗೆ ಮಾಜಿ ಶಾಸಕ ಇಕ್ಬಾಲ್‌ ಅನ್ಸಾರಿ ಮತ್ತು ಬಿಜೆಪಿ ಮುಖಂಡರು ಇಬ್ಬರೂ ಹೊಣೆಗಾರರಾಗಿದ್ದಾರೆ ಎಂದು ಮಾಜಿ ಸಂಸದ, ಕಾಂಗ್ರೆಸ್‌ ಮುಖಂಡ ಎಚ್‌.ಜಿ.ರಾಮುಲು ತಿಳಿಸಿದರು.
ತಮ್ಮ ನಿವಾಸದಲ್ಲಿ ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ.12 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿ ಸೇರಿದಂತೆ ಇಡೀ ರಾಜ್ಯದಲ್ಲಿ ಮುಸ್ಲಿಂ ಸಮಾಜದವರು ಜೆಡಿಎಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್‌ ಪಕ್ಷದ ಬಗ್ಗೆ ತಮಗೆ ಅಪಾರ ಗೌರವವಿದೆ. ಪಕ್ಷದ ಆಶೀರ್ವಾದದಿಂದ ತಾವು ರಾಜಕೀಯದಲ್ಲಿ ಬೆಳೆಯಲು ಸಾಧ್ಯವಾಗಿದೆ. ತಾವು ಇಂದಿರಾಗಾಂಧಿ ಮತ್ತು ದೇವರಾಜ ಅರಸ್‌ ಅವರ ಗರಡಿಯಲ್ಲಿ ಪಳಗಿದ್ದೇನೆ ಎಂದು ತಿಳಿಸಿದರು. ತಮಗೆ ವಯಸ್ಸಾಗಿದೆ ತಾವು ರಾಜಕೀಯದಿಂದ ನಿವೃತ್ತಿ ಹೊಂದಿದ್ದೇನೆ. ಕಾಂಗ್ರೆಸ್‌ ಪಕ್ಷವನ್ನು ದೂಷಿಸುವದಿಲ್ಲ. ಈ ಪಕ್ಷವು ಒಂದು ಸಂದರ್ಭದಲ್ಲಿ ಬಡವರ, ರೈತರ, ದಲಿತರ ಅಭಿವೃದ್ದಿಯನ್ನು ಮಾಡಿದೆ. ಆದರೆ ಇಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಉತ್ತಮ ಸಾರಥಿ ಇಲ್ಲದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಸರ್ವ ನಾಶಗೊಳ್ಳುತ್ತದೆ ಎಂದು ಹೇಳಿದರು.
ಇಂದಿರಾಗಾಂಧಿ ನಂತರ ಪಕ್ಷಕ್ಕೆ ಬಲಿಷ್ಠ ನಾಯಕರಿಲ್ಲ. ತಾವು ಸಂಸದರಾಗಿದ್ದ ಸಂದರ್ಭದಲ್ಲಿ ರಾಯಚೂರು ಜಿಲ್ಲೆ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಆದರೆ ಅದು ಇಂದು ಛಿದ್ರಗೊಂಡಿದೆ ಎಂದು ತಿಳಿಸಿದರು.
ಸಮ್ಮಿಶ್ರ ಸರಕಾರ ರಚನೆ: ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್‌ ದಿವಾಳಿಯಾಗಲಿದೆ. ಜೆಡಿಎಸ್‌ ಮತ್ತು ಬಿಜೆಪಿ ಸೇರಿಕೊಂಡು ಸಮ್ಮಿಶ್ರ ಸರಕಾರ ರಚನೆಯಾಗುತ್ತದೆ. ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವರು ಎಂದು ತಿಳಿಸಿದರು.
ಪ್ರಾದೇಶಿಕ ಪಕ್ಷಗಳಿಂದ ರಕ್ಷಣೆ: ರಾಷ್ಟ್ರೀಯ ಪಕ್ಷಗಳು ಜನರನ್ನು ರಕ್ಷಣೆ ಮಾಡುವಲ್ಲಿ ವಿಫಲಗೊಂಡಿವೆ. ಆದರೆ ಪ್ರಾದೇಶಿಕ ಪಕ್ಷಗಳು ನಾಡಿನ ಜನರ ರಕ್ಷಣೆ ಮಾಡುತ್ತದೆ ಎಂದು ಹೇಳಿದರು.
ಧರ್ಮಗಳನ್ನು ಇಬ್ಭಾಗ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಕಳಂಕ ತಂದಿದೆ. ವೀರಶೈವ ಸಮಾಜವನ್ನು ಇಬ್ಭಾಗ ಮಾಡಿರುವ ಸಿದ್ದರಾಮಯ್ಯನವರು ಎರಡೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸುತ್ತಾರೆ ಎಂದು ತಿಳಿಸಿದರು.
ಈ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮಾದವರು ನಿರ್ಣಾಯಕ ಮತದಾರರಾಗಿದ್ದಾರೆ. ಜನರಿಗೆ ಶಾಂತಿ ನೆಮ್ಮದಿ ಇಲ್ಲದಾಗಿದೆ. ಹಿಂದೂ, ಮುಸ್ಲಿಂರು ಒಗ್ಗಟ್ಟಾಗಿ ಶಾಂತಿ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಮುಸ್ಲಿಂ ಸಮಾಜದವರು ಜೆಡಿಎಸ್‌ ಅಭ್ಯರ್ಥಿ ಕರಿಯಣ್ಣ ಸಂಗಟಿಗೆ ಮತ ಚಲಾಯಿಸಿಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮ ಗುರು ಮೀರ್‌ ಇಬ್ರಾಹಿಂ ಅಲಿ ಖಾಜಿ, ಮಾರೂಕ್‌ ಪಾಷಾ ಖಾದ್ರಿ, ಬಸಾಪಟ್ಟಣದ ಹಾಫೀಜಾ ಖಾಜಾ ಮೊಹಿನುದ್ದೀನ, ಅಯೂಬ್‌ ಖಾನ್‌, ಅಜರ್‌ ಅನ್ಸಾರಿ, ಅಮ್ಜದ್‌ ಅನ್ಸಾರಿ, ಮಹ್ಮದಲಿ ಜಿನ್ನಾ, ಶಿಬ್ಬೀರ, ಭಾಷಾ ಮೇಸ್ತ್ರಿ, ನಾಜೀಂ, ಶೇಖನಬಿ, ಸೈಯದ್‌ ಉಸ್ಮಾನ, ಪಾಡಗುತ್ತಿ ಅಕ್ತರಸಾಬ, ಆರ್ಯ ಈಡಗೇರ ಸಮಾಜದ ಜಿಲ್ಲಾ ಅಧ್ಯಕ್ಷ ಆಂಜನಪ್ಪ ಪಾಲ್ಗೊಂಡಿದ್ದರು.

loading...