ಗಾಂಜಾ ಕೂಬಿಂಗ್ ಆರಂಭಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು: ಶಾಸಕ ಹೆಗಡೆ

0
14
loading...

ಕನ್ನಡಮ್ಮ ಸುದ್ದಿ-ಶಿರಸಿ: ಶಿರಸಿ ನಗರದಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಮಾರಾಟ ಮಿತಿ ಮೀರಿದ್ದು, ಅಪರಾಧಿಗಳಿಗೆ ಹೆದರಿಕೆಯೇ ಇಲ್ಲದಂತಾಗಿದೆ. ಪೊಲೀಸ್ ಇಲಾಖೆ ಶಾಮೀಲಿನ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿರುವ ಕಾರಣ ತಕ್ಷಣ `ಗಾಂಜಾ ಕೂಬಿಂಗ್’ ಆರಂಭಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಸೂಚಿಸಿದರು.
ಶಿರಸಿ ಮಿನಿ ವಿಧಾನಸೌಧದಲ್ಲಿ ಬುಧವಾರ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಕೈಗೊಂಡ ಕಾಗೇರಿ, ಶಿರಸಿಯಲ್ಲಿ ಪೊಲೀಸ್ ಇಲಾಖೆ ಇದ್ದೂ ಇಲ್ಲದಂತಾಗಿದೆ. ಮಾದಕ ವಸ್ತುಗಳ ಮರಾಟ ಹಾಗೂ ಸೇವನೆ ಮಿತಿ ಮೀರಿದ್ದು ಯುವ ಸಮೂಹ ಬಲಿಯಾಗುತ್ತಿದೆ. ಎಲ್ಲ ವಿಷಯಗಳು ತಿಳಿದಿದ್ದರೂ ಪೊಲೀಸ್ ಇಲಾಖೆ ಮಾತ್ರ ಸುಮ್ಮನಿರುವುದು ಸಂಶಯಕ್ಕೆ ಎಡೆ ಮಾಡುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಇಲಾಖೆಯ ಜವಾಬ್ದಾರಿ ಹೆಚ್ಚಿದ್ದು ತಕ್ಷಣ ನಗರದಾದ್ಯಂತ ಗಾಂಜಾ ಕೂಬಿಂಗ್ ಮಾಡಬೇಕು. ವ್ಯಸನದತ್ತ ಸಾಗುತ್ತಿರುವ ಯುವಕರನ್ನು ರಕ್ಷಿಸಬೇಕು ಎಂದು ಖಡಕ್ಕಾಗಿ ಎಚ್ಚರಿಸಿದರು. ಪ್ರೌಢಶಾಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮಾಡುವ ವಿದ್ಯಾರ್ಥಿಗಳ ಬಗ್ಗೆ ಜಾಗೃತಿವಹಿಸಬೇಕು. ಒಂದೊಮ್ಮೆ ಅಂತಹ ಸನ್ನಿವೇಶ ಎದುರಾದರೆ ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು. ನಗರದಲ್ಲಿ ಟ್ರಾಫಿಕ್, ಒನ್ ವೇ ಹಾಗೂ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ತಿಳಿಸಿದರು.\ವಿದ್ಯುತ್ ಅವ್ಯವಸ್ಥೆ ಕುರಿತು ಹೆಸ್ಕಾಂ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಕಾಗೇರಿ, ವಿದ್ಯುತ್ ಸಮರ್ಪಕವಾಗಿಲ್ಲ. ಜಂಗಲ್ ಕ್ಲಿಯರ್ ಮಾಡಿಸಿ. ಜಿಲ್ಲೆಗೆ ಪವರ್ ಕಟ್ ಇಲ್ಲದಿದ್ದರೂ ಇಲಾಖೆ ವಿಳಂಬತನದಿಂದ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ದೀನದಯಾಳ ಗ್ರಾಮೀಣ ವಿದ್ಯುದೀಕರಣದಡಿ ಕೇವಲ ಶೇ.20ರಷ್ಟು ಕಾಮಗಾರಿ ನಡೆದಿದೆ. ತ್ವರಿತವಾಗಿ ಜನತೆಗೆ ವಿದ್ಯುತ್ ನೀಡುವ ಕೆಲಸ ಆಗಬೇಕು ಎಂದು ತಿಳಿಸಿದರು.

ಕೆ.ವಿ.ಖೂರ್ಸೆ ಮಾತನಾಡಿ ಕೃಷಿ ಇಲಾಖೆಯಲ್ಲಿ ಬೀಜ, ಗೊಬ್ಬರ ದಾಸ್ತಾನಿದೆ. ಕೃಷಿ ಅಭಿಯಾನ ಜೂನ್ 4ರಿಂದ 1 ವಾರ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕೃಷಿ ಯಾಂತ್ರೀಕರಣದಡಿ ಕೃಷಿ ಯಂತ್ರಧಾರೆ ಮಳಿಗೆಗಳು ಆರಂಭವಾಗಬೇಕಿತ್ತು. ಆದರೆ ಅದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಕಾಗೇರಿ ಮಳೆಗಾಲ ಮುಗಿದ ನಂತರ ಕೃಷಿ ಹೊಂಡಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ತೋಟಗಾರಿಕಾ ಇಲಾಖೆಯಡಿ ಕೃಷಿ ಯಾಂತ್ರೀಕರಣದಡಿ ಕಳೆದ ವರ್ಷ ಅನುದಾನ ಬಂದಿಲ್ಲ. 1.5 ಕೋಟಿ ರೂ.ಗಳಷ್ಟು ಸಹಾಯಧನ ಸರ್ಕಾರದಿಂದ ಬರಬೇಕಿದೆ ಎಂದು ಇಲಾಖೆ ಅಧಿಕಾರಿ ಸತೀಶ ಹೆಗಡೆ ಸಭೆಗೆ ವಿಷಯ ತಿಳಿಸಿದರು.

ನನ್ನ ಉದಾರತೆ ನನ್ನ ದೌರ್ಬಲ್ಯ ಎಂದು ಅಧಿಕಾರಿಗಳು ಭಾವಿಸಬಾರದು ಎಂದ ಕಾಗೇರಿ, ಜನರಿಗೆ ಅಭಿವೃದ್ಧಿಯಲ್ಲಿ ತೃಪ್ತಿಯಿದ್ದರೆ ಜನಪ್ರತಿನಿಧ ಮತ್ತೆ ಆಯ್ಕೆಯಾಗುತ್ತಾನೆ. ಇಲ್ಲದಿದ್ದರೆ ಬದಲಾವಣೆ ಮಾಡುತ್ತಾರೆ. ಹಾಗಾಗಿ ಜನರ ಅಪೇಕ್ಷೆ ಮೇರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಮಾಡಬೇಕು. ಸರ್ಕಾರದ ಸುತ್ತೋಲೆ ಹೊರತಾಗಿಯೂ ಜನಪರ, ಕ್ರಿಯಾಶೀಲ ಹಾಗೂ ಮಾನವೀಯವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.

loading...