ಗೊಂದಲದ ಗೂಡಾದ ಬಿಕಾಂ ಅಂತಿಮ ವರ್ಷದ ಪರೀಕ್ಷೆ

0
45
loading...

ಕನ್ನಡಮ್ಮ ಸುದ್ದಿ- ಖಾನಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ನಡೆಯುತ್ತಿರುವ ಪದವಿ ಪರೀಕ್ಷೆಗಳಲ್ಲಿ ಇಲ್ಲದ ವಿಷಯಕ್ಕೆ ಪರೀಕ್ಷೆ ತೆಗೆದುಕೊಳ್ಳುವುದು, ಒಂದು ದಿನ ನಿಗದಿಯಾಗಿದ್ದ ಪರೀಕ್ಷೆಯನ್ನು ಮತ್ತೊಂದು ದಿನ ನಡೆಸುವುದು ಮತ್ತು ಪರೀಕ್ಷೆಯ ಸೂಪರ್‍ವೈಸರ್ ಕೆಲಸಕ್ಕೆ ಖಾಸಗಿ ವ್ಯಕ್ತಿಗಳನ್ನು ನೇಮಿಸುವುದು ಸೇರಿದಂತೆ ಕಾಲೇಜಿನ ಪ್ರಾಚಾರ್ಯರು ಹಲವು ಗೋಲ್‍ಮಾಲ್‍ಗಳನ್ನು ಮಾಡಿದ್ದಾರೆ. ಪ್ರಾಚಾರ್ಯರ ಈ ಕಾರ್ಯಕ್ಕೆ ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಸಾತ್ ನೀಡುತ್ತಿದ್ದು, ಇದರಿಂದಾಗಿ ನಾವು ತೊಂದರೆ ಅನುಭವಿಸುವಂತಾಗಿದೆ ಎಂದು ಕಾಲೇಜಿನ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧೀನಕ್ಕೊಳಪಟ್ಟ ಕಾಲೇಜಿನಲ್ಲಿ ಗುರುವಾರ ನಡೆದ ಅಂತಿಮ ಬಿ.ಕಾಂ ಪದವಿಯ ಇನ್ ಕಮ್ ಟ್ಯಾಕ್ಸ್ 2 ಪರೀಕ್ಷೆ ಇತ್ತು. ಪರೀಕ್ಷೆಗೆ ಕಾಲೇಜಿನ ಅಂತಿಮ ಬಿ.ಕಾಂನ ಒಟ್ಟು 22 ರೆಗ್ಯುಲರ್ ವಿದ್ಯಾರ್ಥಿಗಳು ಹಾಜರಾಗಿದ್ದರು. ಆದರೆ ಕಾಲೇಜಿನ ಪ್ರಾಂಶುಪಾಲರು ಮತ್ತು ಪರೀಕ್ಷಾ ಸಿಬ್ಬಂದಿ ಪರೀಕ್ಷಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಸಿದ್ಧಪಡಿಸಿ ಕಳುಹಿಸಿದ್ದ ರೆಗ್ಯುಲರ್ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ವಿತರಿಸದೇ ರಿಪಿಟರ್ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಯನ್ನು ವಿತರಿಸಿದ್ದರು. ಹೀಗೆ ವಿತರಿಸಿದ ಪ್ರಶ್ನೆ ಪತ್ರಿಕೆಯಲ್ಲಿ ಶೇ.40ರಷ್ಟು ಪ್ರಶ್ನೆಗಳಲ್ಲಿ ಗೊಂದಲವಿದ್ದು, ಪಠ್ಯದಲ್ಲಿ ಇರುವ ಪಠ್ಯಕ್ರಮ ಮತ್ತು ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಗಳಿಗೆ ಸಾಮ್ಯತೆ ಇರಲಿಲ್ಲ. ಹೀಗಾಗಿ ಪರೀಕ್ಷಾರ್ಥಿಗಳು ಈ ವಿಷಯವನ್ನು ಕೊಠಡಿ ಪರೀಕ್ಷಕರ ಗಮನಕ್ಕೆ ತಂದಿದ್ದರು. ಕೊಠಡಿ ಪರೀಕ್ಷಕರು ಮುಖ್ಯ ಪರೀಕ್ಷಕರಿಗೆ ಮತ್ತು ಪ್ರಾಂಶುಪಾಲರಿಗೆ ಈ ವಿಷಯ ತಿಳಿಸಿದಾಗ ಇಬ್ಬರೂ ಈ ಬಗ್ಗೆ ಸೂಕ್ತ ಕ್ರಮ ಜರುಗಿಸದೇ ನಿರ್ಲಕ್ಷ ವಹಿಸಿದ್ದರಿಂದ ತಮಗೆ ವಿತರಿಸಲಾದ ಪ್ರಶ್ನೆ ಪತ್ರಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಈ ವಿಷಯವಾಗಿ ಗುರುವಾರ ಸಂಜೆಯೇ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗಕ್ಕೆ ದೂರು ನೀಡಿದ್ದರು. ವಿದ್ಯಾರ್ಥಿಗಳ ದೂರಿನ ಹಿನ್ನೆಲೆಯಲ್ಲಿ ಈ ಕುರಿತು ಕಾಲೇಜಿನ ಪ್ರಾಚಾರ್ಯರನ್ನು ವಿಶ್ವವಿದ್ಯಾಲಯದವರು ಸ್ಪಷ್ಟನೆ ಕೇಳಿದ್ದರು. ಕೂಡಲೇ ಎಚ್ಚೆತ್ತ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಗುರುವಾರ ಪರೀಕ್ಷೆ ಬರೆದಿದ್ದ ಎಲ್ಲ 22 ವಿದ್ಯಾರ್ಥಿಗಳನ್ನು ಶುಕ್ರವಾರ ಮತ್ತೆ ಕಾಲೇಜಿಗೆ ಕರೆಸಿ ಸರಿಯಾದ ಪ್ರಶ್ನೆ ಪತ್ರಿಕೆ ನೀಡಿ ಮತ್ತೊಮ್ಮೆ ಪರೀಕ್ಷೆ ಬರೆಸಿದ್ದಾರೆ. ತಮ್ಮದಲ್ಲದ ತಪ್ಪಿಗೆ ಮತ್ತು ಕಾಲೇಜಿನವರ ಅಚಾತುರ್ಯಕ್ಕೆ ಒಂದೇ ವಿಷಯದ ಪರೀಕ್ಷೆಯನ್ನು ಎರಡು ಸಲ ಬರೆಯುವಂತೆ ಮಾಡಿದ ಕಾಲೇಜಿನ ಪ್ರಾಚಾರ್ಯರು ಮತ್ತು ಪರೀಕ್ಷಾ ಸಿಬ್ಬಂದಿಯ ವಿರುದ್ಧ ಅಂತಿಮ ಬಿಕಾಂ ವಿದ್ಯಾರ್ಥಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

2017ರ ಅಕ್ಟೋಬರ್ ತಿಂಗಳಲ್ಲಿ ನಡೆದ 3ನೇ ಸೆಮಿಸ್ಟರ್‍ನ ಬಿಬಿಎ ಪರೀಕ್ಷೆಯಲ್ಲೂ ಕಾಲೇಜಿನ ಪ್ರಾಚಾರ್ಯರು ಮತ್ತು ಸಿಬ್ಬಂದಿ ಇದೇ ರೀತಿಯ ಪ್ರಮಾದವನ್ನು ಎಸಗಿದ್ದರು. ಬಿಬಿಎ ವಿದ್ಯಾರ್ಥಿಗಳಿಗೆ ವರ್ಷಪೂರ್ತಿ ಇಂಗ್ಲೀಷ್ ವಿಷಯವನ್ನು ಬೋಧಿಸದೇ ಪರೀಕ್ಷೆಯಲ್ಲಿ ಮಾತ್ರ ಇಂಗ್ಲೀಷ್ ವಿಷಯದ ಪ್ರಶ್ನೆ ಪತ್ರಿಕೆ ವಿತರಿಸಿ ವಿದ್ಯಾರ್ಥಿಗಳನ್ನು ತಬ್ಬಿಬ್ಬುಗೊಳಿಸಿದ್ದರು. ತಾವು ಸೆಮಿಸ್ಟರ್‍ನ ಅವಧಿಯಲ್ಲಿ ವಿಷಯವನ್ನು ಓದದಿದ್ದರೂ ಪರೀಕ್ಷೆಯನ್ನು ಬರೆಯುವಂತೆ ಆಗ್ರಹಿಸಿದ್ದ ಕಾಲೇಜಿನ ಪ್ರಾಚಾರ್ಯರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಇದರಿಂದ ವಿಚಲಿತಗೊಂಡ ಪ್ರಾಚಾರ್ಯರು ಮತ್ತು ಸಿಬ್ಬಂದಿ ಪರೀಕ್ಷೆಯ ದಿನ ಇಂಗ್ಲೀಷ್ ವಿಷಯದ ಬಹುತೇಕ ಉತ್ತರಗಳನ್ನು ಇಂಗ್ಲೀಷ್ ಪ್ರಾಧ್ಯಾಪಕರ ಮೂಲಕ ವಿದ್ಯಾರ್ಥಿಗಳಿಗೆ ಡಿಕ್ಟೇಟ್ ಮಾಡುವ ಮೂಲಕ ಬೀಸುವ ದೊಣ್ಣೆಯಿಂದ ಪಾರಾಗಿದ್ದರು ಎಂದು ಈ ವರ್ಷದ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.

ಕಾಲೇಜಿನಲ್ಲಿ ನಡೆಯುತ್ತಿರುವ ಪದವಿ ಪರೀಕ್ಷೆಗಳ ಸೂಪರ್‍ವೈಸರ್ ಕೆಲಸಕ್ಕೆ ಕಾಲೇಜಿನ ಸಿಬ್ಬಂದಿಯ ಸಂಬಂಧಿಕರು ಸೇರಿದಂತೆ ಖಾಸಗಿ ವ್ಯಕ್ತಿಗಳನ್ನು ಬಳಸುವ ಮೂಲಕ ಪರೀಕ್ಷೆಯ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಪರೀಕ್ಷಾ ಕರ್ತವ್ಯದಲ್ಲಿ ನಿರತ ಖಾಸಗಿ ವ್ಯಕ್ತಿಗಳು ತಮಗೆ ಬೇಕಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡುತ್ತಿದ್ದಾರೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಂತಿಮ ಬಿ.ಎ ವಿದ್ಯಾರ್ಥಿಗಳು ದೂರಿದ್ದಾರೆ.

ಗುರುವಾರ ನಡೆದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಇನ್ ಕಮ್ ಟ್ಯಾಕ್ಸ್ 2 ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದಂತೆ ರಿಪಿಟರ್ ಮತ್ತು ರೆಗ್ಯುಲರ್ ವಿಷಯದ ಶೀರ್ಷಿಕೆ ಒಂದೇ ಆಗಿರುವ ಕಾರಣ ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ಗೊಂದಲವುಂಟಾಗಿತ್ತು. ಆದರೆ ಗೊಂದಲದ ಬಗ್ಗೆ ಮಾಹಿತಿ ತಿಳಿಯುತ್ತಲೇ ಅದನ್ನು ಸರಿಪಡಿಸಲಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂಬುದಾಗಿ ಮೌಲ್ಯಮಾಪನ ವಿಭಾಗದ ಕುಲಸಚಿವರಿಗೆ ಪತ್ರ ಬರೆಯಲಾಗಿದೆ.

ಡಾ.ಡಿ.ಎಂ ಜವಳಕರ, ಪ್ರಾಚಾರ್ಯರು. ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಖಾನಾಪುರ.
ಗುರುವಾರದ ಬಿ.ಕಾಂ ಅಂತಿಮ ಇನ್ ಕಮ್ ಟ್ಯಾಕ್ಸ್ 2 ಪರೀಕ್ಷೆಯಲ್ಲಿ ನಮಗೆ ರೆಗ್ಯುಲರ್ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಪ್ರಶ್ನೆ ಪತ್ರಿಕೆಯ ಬದಲು ರಿಪಿಟರ್ ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆ ಪತ್ರಿಕೆ ನೀಡಿದ್ದರು. ನಂತರ ಸರಿಯಾದ ಪ್ರಶ್ನೆ ಪತ್ರಿಕೆ ನೀಡಿ ಪರೀಕ್ಷೆ ತೆಗೆದುಕೊಳ್ಳಲಾಗಿದೆ. ಆದರೆ ಕಾಲೇಜಿನವರು ತೋರಿದ ನಿರ್ಲಕ್ಷದಿಂದಾಗಿ ಒಂದೇ ವಿಷಯದ ಪರೀಕ್ಷೆಯನ್ನು ಎರಡು ಬಾರಿ ಎದುರಿಸಿದಂತಾಗಿ ಗೊಂದಲ ಮೂಡಿದೆ.
-ಅಂತಿಮ ಬಿ.ಕಾಂ ವಿದ್ಯಾರ್ಥಿ, ಸರ್ಕಾರಿ ಪದವಿ ಕಾಲೇಜು ಖಾನಾಪುರ. (ವಿದ್ಯಾರ್ಥಿಯ ಹೆಸರು ಬೇಡ ಸರ್)

loading...