ಗ್ರಹಸ್ಥರಿಗೆ ಧಾರ್ಮಿಕ ಮಾರ್ಗದರ್ಶನದ ಸೂತ್ರಧಾರಿಗಳು: ಶ್ರೀಗಳು

0
16
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ವೈದಿಕರು ಒಗ್ಗಟ್ಟಿನಿಂದ ಶಾಸ್ತ್ರೀಯ ವಿಷಯಗಳನ್ನು ಚರ್ಚಿಸಿ, ಸೂಕ್ತ ದಾರಿಯಲ್ಲಿ ಸಾಗಬೇಕಾಗಿದೆ. ವೈದಿಕರಿಗೆ ಗುರು, ಆಚಾರ್ಯರೆಂದು ಕರೆಯಲಾಗುತ್ತದೆ. ಅವರೇ ಗ್ರಹಸ್ಥರಿಗೆ ಧಾರ್ಮಿಕ ಮಾರ್ಗದರ್ಶನದ ಸೂತ್ರಧಾರರಾಗಿರುತ್ತಾರೆ. ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳು ನುಡಿದರು.
ಅವರು ನಾಯಕನ ಕೆರೆಯ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಯಲ್ಲಾಪುರ ವೈದಿಕ ಪರಿಷತ್ ಹಮ್ಮಿಕೊಂಡ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಶ್ರೀಗಳ ಪಾದಪೂಜೆ ನಂತರ ಧರ್ಮಸಭೆಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಿದ್ದರು. ಎಲ್ಲಡೆ ಆಗಾಗ ವೈದಿಕ ಸಮಾವೇಶ, ಚಿಂತನೆಗಳು ನಡೆದಾಗ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ವೈದಿಕರಲ್ಲಿ ಏಕರೂಪತೆ ಬರಬೇಕು. ಆದರೆ ವಿವಾಹ ವಿಷಯದಲ್ಲಿ ಆಧುನಿಕತೆಯಲ್ಲಿರುವ ನಾವು ಶಾಸ್ತ್ರೀಯತೆಯನ್ನು ಬಿಡದೇ ಒಂದೇ ರೀತಿಯಲ್ಲಿ ಮಾಡುವಂತಾಗಬೇಕು ಹಾಗೂ ಧಾರ್ಮಿಕ ವಾತಾವರಣದ ಶಕ್ತಿಯಾಗಬೇಕು. ಎಂದ ಶ್ರೀಗಳು ಎಲ್ಲ ವೈದೀಕರು ಸೇರಿ ಪ್ರತಿವರ್ಷ ಶತಚಂಡಿ ಯಾಗ, ಗಾಯತ್ರಿ ಯಾಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು, ಧರ್ಮಸಭೆಗಳನ್ನು, ಚಿಂತನ ಗೋಷ್ಟಿಗಳನ್ನು ನಡೆಸಬೇಕು. ಅದು ಶಾಸ್ತ್ರ ಸಮ್ಮತವಾಗಿರಬೇಕು. ವೈದೀಕ ಧರ್ಮ ಸಮೃದ್ಧವಾಗಿದ್ದಾಗ ಮಾತ್ರ ಅದರ ಫಲ ಸಮಾಜಕ್ಕೆ ಲಭಿಸುತ್ತದೆ ಎಂದರು.

ಶ್ರೀ ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ಟ ಮಾತನಾಡಿ, ಇಲ್ಲಿನ ಶಾರದಾಂಬಾ ಸನ್ನಿಧಾನದಲ್ಲಿ ಸದಾ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳು ಮತ್ತು ಚಿಂತನೆ, ಉಪನ್ಯಾಸ ನಡೆಯಬೇಕು. ಎಂಬುದೇ ನಮ್ಮ ಆಶಯ. ವೈದಿಕ ಪರಿಷತ್ತು ಒಂದು ನಿಯಮಾವಳಿ ರೂಪಿಸಿ, ಅದನ್ನು ಪ್ರತಿ ವೈದಿಕರು ಅನುಸರಿಸಬೇಕು. ವೈದೀಕರು ತಮ್ಮ ಗೌರವ ಉಳಿಸಿಕೊಳ್ಳುವಂತಹ ವೇಷ ಭೂಷಣ ಉಡುಗೆ-ತೊಡುಗೆಗಳನ್ನು ಧರಿಸಬೇಕು. ಜೊತೆಯಲ್ಲಿ ಶಾರದಾಂಬಾ ಆವಾರದಲ್ಲಿ ಧಾರ್ಮಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಧಾರ್ಮಿಕ ಗ್ರಂಥಾಲಯವನ್ನು ಪ್ರಾರಂಭಿಸಬೇಕು ಎಂದರು.

ಈ ಸಂದರ್ಭದಲ್ಲಿ ವೇದಾಧ್ಯಯನದ ವಿದ್ಯಾರ್ಥಿಗಳು ಅಧ್ಯಾಪಕ ವೇ.ಮೂ||ವಿಶ್ವನಾಥ ಭಟ್ಟರಿಗೆ ಶ್ರೀಗಳ ಅಮೃತ ಹಸ್ತದಿಂದ ಗೌರವ ಸಲ್ಲಿಸಿದರು. ಹಿರಿಯ ವಿದ್ವಾಂಸ ವಾಯ್.ಕೃಷ್ಣ ಶರ್ಮಾ ಬೆಂಗಳೂರು, ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಉಪಸ್ಥಿತರಿದ್ದರು.
ವೇದ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ವೈದಿಕ ಪ್ರ.ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ಭಟ್ಟ ತಾರೀಮಕ್ಕಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸದಸ್ಯರಾದ ವೇ.ಮೂ||ಗಣಪತಿ ಭಟ್ಟ ಕೋಲಿಬೇಣ ನಿರ್ವಹಿಸಿದರು. ವೇ.ಮೂ||ವೆಂಕಟರಮಣ ಭಟ್ಟ ಮೊಟ್ಟೆಗದ್ದೆ ವಂದಿಸಿದರು.

loading...