ಚಿತ್ತರಗಿ ಗ್ರಾಮಸ್ಥರಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ

0
19
loading...

ಅಮೀನಗಡ: ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಖಂಡಿಸಿ ಸಮೀಪದ ಚಿತ್ತರಗಿ ಗ್ರಾಮಸ್ಥರು ಸ್ಥಳೀಯ ಹೆಸ್ಕಾಂ ಶಾಖಾ ಕಚೇರಿ ಹಾಗೂ ವಿದ್ಯುತ್ ವಿತರಣೆ ಕೇಂದ್ರಕ್ಕೆ ಮುತ್ತಿಗೆ ಹಾಕಿ ಅಧಿಕಾರಿಗಳ ಕಾರ್ಯ ವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮೂರ್ನಾಲ್ಕು ದಿನದಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೀವ್ರ ತೊಂದರೆ ಆಗಿದೆ. ಕೇಳದರೆ ಹೆಸ್ಕಾಂ ಸಿಬ್ಬಂದಿ ಇಲ್ಲಸಲ್ಲದ ಸಬೂಬು ಹೇಳುತ್ತಾರೆ. ರಾತ್ರಿಯಿಡೀ ವಿದ್ಯುತ್ ಕೈ ಕೊಡುತ್ತಿರುವುದರಿಂದ ನಾವು ಅನುಭವಿಸುತ್ತಿರುವ ತೊಂದರೆ ಹೇಳ ತೀರದಾಗಿದೆ. ಕೂಡಲೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮಸ್ಥರು ಹೆಸ್ಕಾಂ ಶಾಖಾ ಕಚೇರಿ ಹಾಗೂ ವಿದ್ಯುತ್ ವಿತರಣೆ ಕೇಂದ್ರದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಬೇರೆಡೆ ವಿದ್ಯುತ್ ಪೂರೈಸಿದರೂ ನಮ್ಮ ಗ್ರಾಮಕ್ಕೆ ವಿದ್ಯುತ್ ಇಲ್ಲದಂತಾಗಿದೆ. ನದಿಯಲ್ಲಿ ನೀರು ಬಂದಿದ್ದು ವಿದ್ಯುತ್ ಪೂರೈಕೆ ಸ್ಥಗಿತದಿಂದಾಗಿ ರೈತರೂ ಸಹ ತೊಂದರೆ ಪಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರು ಮುತ್ತಿಗೆ ಹಾಕಿದ ಅವಧಿಯಲ್ಲಿ ಶಾಖಾಧಿಕಾರಿ ಅವಿನಾಶ ಜಿ., ಕಾರ್ಯದ ನಿಮಿತ್ತ ಸಭೆಗೆ ತೆರಳಿದ್ದರು. ಸ್ಥಳಕ್ಕೆ ಆಗಮಿಸಿದ ಠಾಣಾಧಿಕಾರಿ ಚಂದ್ರಶೇಖರ ಬಿ., ಧರಣಿ ನಿತರ ಗ್ರಾಮಸ್ಥರೊಂದಿಗೆ ಮಾತನಾಡಿ ಹೆಸ್ಕಾಂ ಶಾಖಾಧಿಕಾರಿಯೊಂದಿಗೆ ವಿದ್ಯುತ್ ಸಮಸ್ಯೆ ಕುರಿತು ಚರ್ಚಿಸಿ ತೊಂದರೆ ಆಗದಂತೆ ಸೂಚಿಸುವುದಾಗಿ ತಿಳಿಸಿದ ಮೇಲೆ ಗ್ರಾಮಸ್ಥರು ಮುತ್ತಿಗೆಯನ್ನು ಹಿಂಪಡೆದರು.

ನೀಲಕಂಠಪ್ಪ ನಾಲತವಾಡ, ಶೇಖರಪ್ಪ ಕೋಟಿಕಲ್ಲ, ಮಲ್ಲಣ್ಣ ಬಿಸರಡ್ಡಿ, ಬಸಪ್ಪ ನಾಲತವಾಡ, ಮನೋಹರ ಕಾಮಾ, ರಾಮಣ್ಣ ಕಮತ, ಮಹಾಂತೇಶ ಬಾಲರಡ್ಡಿ ಸೇರಿದಂತೆ ಇತರರು ಇದ್ದರು.

loading...