ಚುನಾಯಿತ ಸದಸ್ಯರು ದಲ್ಲಾಳಿಗಳಾಗಿದ್ದಾರೆ ಶಾಸಕ ಹೆಗಡೆ ಆರೋಪ

0
19
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಪುರಸಭೆ ಆಡಳಿತ ಮಂಡಳಿಯಲ್ಲಿ ಚುನಾಯಿತ ಸದಸ್ಯರು ದಲ್ಲಾಳಿಗಳಾಗಿದ್ದಾರೆ ಎಂದು ಆರೋಪಿಸಿರುವ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುನೀಲ ಹೆಗಡೆ ಅವರ ಹೇಳಿಕೆಯನ್ನು ಪುರಸಭೆ ಆಡಳಿತ ಮಂಡಳಿಯು ತೀವೃವಾಗಿ ಖಂಡಿಸಿದೆ.
ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಅವರು ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸುನೀಲ ಹೆಗಡೆ ಅವರು ತಮ್ಮ ಆರೋಪವನ್ನು ದಾಖಲೆಗಳ ಸಮೇತ ಸಾಬೀತುಪಡಿಸಬೇಕು ಎಂದು ಸವಾಲೆಸೆಯುವುದಾಗಿ ಹೇಳಿದರು.

ಹಳಿಯಾಳ ಪಟ್ಟಣದ ನಾಗರಿಕರಿಗೆ ನಿರಂತರ ನೀರು ಪೂರೈಸುವ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಯಲ್ಲಿ ಎಲ್ಲಿಯೂ ಅವ್ಯವಹಾರವಾಗಿಲ್ಲ. ಮಾತ್ರವಲ್ಲದೇ ಸರ್ಕಾರದ ನಿಯಾಮವಳಿಯಂತೆ ನೀರಿನ ಬಳಕೆಯ ಪ್ರಮಾಣ ಆದರಿಸಿ ಕರ ಆಕರಣೆ ನಡೆದಿದೆ.
ಆರ್.ವಿ. ದೇಶಪಾಂಡೆಯವರ ಆಶೀರ್ವಾದದಿಂದ ಸುನೀಲ ಹೆಗಡೆಯವರು ಪುರಸಭೆಯ ಅಧ್ಯಕ್ಷರಾಗಿ 2002ರಲ್ಲಿ ನೇಮಕವಾಗಿದ್ದರು.

ಪುರಸಭೆಯ ವತಿಯಿಂದ ಇರುವ ಮೀನು ಮಾರುಕಟ್ಟೆ ಕಟ್ಟಡದ ಮೇಲ್ಭಾಗದಲ್ಲಿ ಚಿಕನ್ ಮಾರುಕಟ್ಟೆ ನಿರ್ಮಿಸಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಅದರ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳ ಬಳಿ ಪ್ರಸ್ತಾವನೆ ಕಳುಹಿಸಲಾಗಿದೆ. ಚಿಕನ್ ಅಂಗಡಿಗಳ ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಪ್ರತಿದಿನ ಕಳಿಸುವ ಕಾರ್ಯವನ್ನು ಪುರಸಭೆ ಮಾಡುತ್ತಿದ್ದು ತನ್ಮೂಲಕ ಸ್ವಚ್ಛತೆ ಕಾಪಾಡುವ ಕೆಲಸ ನಡೆಯುತ್ತಿದೆ. ಚಿಕನ್ ಅಂಗಡಿಗಳ ಮೂಲಕ ಉಪಜೀವನ ನಿರ್ವಹಣೆ ಮಾಡಿಕೊಳ್ಳುತ್ತಿರುವ ಬಡಜನರನ್ನು ಬೀದಿಪಾಲು ಮಾಡುವ ಹುನ್ನಾರವನ್ನು ಮಾಜಿ ಶಾಸಕ ಸುನೀಲ ಹೆಗಡೆ ಆರಂಭಿಸಿದ್ದಾರೆ ಎಂದು ಆರೋಪಿಸಿದರು.

ಈ ಸಲ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುನೀಲ ಹೆಗಡೆ ಎರಡನೇ ಬಾರಿಯ ಸೋಲಿನಿಂದ ಹತಾಷರಾಗಿದ್ದಾರೆ. ಹಳಿಯಾಳ ಪಟ್ಟಣದಲ್ಲಿ ಆರ್.ವಿ. ದೇಶಪಾಂಡೆಯವರಿಗೆ ಹೆಚ್ಚಿನ ಮತಗಳು ದೊರೆತಿವೆ. ಹೀಗಾಗಿ ಬಡ ಅಲ್ಪಸಂಖ್ಯಾತರ ಮೇಲೆ ತಮ್ಮ ಸೋಲಿನ ಸಿಟ್ಟನ್ನು ಹೊರಗೆಡವುತ್ತಿದ್ದಾರೆ. ಅದಕ್ಕಾಗಿ ಕಸಾಯಿಖಾನೆ, ಚಿಕನ್ ಅಂಗಡಿಗಳ ವಿಷಯವನ್ನು ಕೆದಕಿದ್ದಾರೆ. ತಮ್ಮ ರಾಜಕೀಯ ತೆವಲಿಗಾಗಿ ಪುರಸಭೆ ಆಡಳಿತ ಮಂಡಳಿಯವರ ವಿರುದ್ಧ ಆಧಾರ ರಹಿತವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆಯ ಆಡಳಿತ ಮಂಡಳಿ ಸದಸ್ಯರಾದ ಸುರೇಶ ತಳವಾರ, ಫಯಾಜ ಶೇಖ್, ಇನಾಯುತುಲ್ಲಾ ಬೇಪಾರಿ, ಉಮೇಶ ಬೊಳಶೆಟ್ಟಿ, ಅನಿಲ ಫರ್ನಾಂಡೀಸ್ ಪತ್ರಿಕಾಗೋಷ್ಠಿಯಲ್ಲಿದ್ದರು ಉಪಸ್ಥಿತರಿದ್ದರು.

loading...