ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆ ಈಡೇರಿಸುತ್ತೇವೆ: ಎಸ್‌.ಎಲ್‌. ಘೋಟ್ನೇಕರ

0
20
loading...

ಹಳಿಯಾಳ: ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಕಾಂಗ್ರೆಸ್‌ ಅಭ್ಯರ್ಥಿಯಾದ ಹಿರಿಯ, ಮುತ್ಸದ್ಧಿ, ಅಭಿವೃದ್ಧಿಪರ ರಾಜಕಾರಣಿಯಾಗಿರುವ ಆರ್‌.ವಿ. ದೇಶಪಾಂಡೆಯವರಿಗೆ ಗೆಲ್ಲಿಸುವ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದು, ಚುನಾವಣಾ ಪೂರ್ವದಲ್ಲಿ ನಾವು ಕ್ಷೇತ್ರದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವ ಕಾರ್ಯ ಮಾಡುತ್ತೇವೆ ಎಂದು ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್‌ ಮುಖಂಡ ಶ್ರೀಕಾಂತ ಘೋಟ್ನೇಕರ ಹೇಳಿದರು.
ತಮ್ಮ ಕಾರ್ಯಾಲಯದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಘೋಟ್ನೇಕರ ಚುನಾವಣೆ ಫಲಿತಾಂಶದ ಬಗ್ಗೆ ವಿಶ್ಲೇಷಣೆ ಮಾಡಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಪುನರಾಯ್ಕೆಗೊಂಡ ಆರ್‌.ವಿ. ದೇಶಪಾಂಡೆ ಹಾಗೂ ಶಿವರಾಮ ಹೆಬ್ಬಾರ ಅವರಿಗೆ ಅಭಿನಂದಿಸುವದಾಗಿ ತಿಳಿಸಿದ ಅವರು ಕಾರವಾರದ ಸತೀಶ ಸೈಲ್‌, ಭಟ್ಕಳದ ಮಂಕಾಳು ವೈದ್ಯ, ಕುಮಟಾದ ಶಾರದಾ ಶೆಟ್ಟಿ ಇವರುಗಳು ಸಹ ಶಾಸಕರಾಗಿ ಬಹಳಷ್ಟು ಅಭಿವೃದ್ಧಿ ಕಾರ್ಯ ಮಾಡಿರುವುದು ಜನರಿಗೆ ಸ್ಪಂದನೆ ನೀಡಿರುವುದು ಹಾಗೂ ದಾನ-ಧರ್ಮ ಮಾಡುತ್ತಾ ಬಂದಿದ್ದರೂ ಸಹ ಸೋಲು ಅನುಭವಿಸಿರುವುದು ಆಶ್ಚರ್ಯಕರವಾಗಿದೆ ಎಂದರು.
ಅಭಿವೃದ್ಧಿ ಎಂಬುದು ನಿಂತ ನೀರಲ್ಲ. ರೈತರಿಗೆ ಒಳಗೊಂಡು ಎಲ್ಲಾ ಮತದಾರರಿಗೆ ಅನುಕೂಲವಾಗುವ ಹಾಗೆ ಕಾರ್ಯಗಳನ್ನು ಮುಂದುವರಿಸಲಾಗುವುದು. ಕಳೆದ ಅವಧಿಯಲ್ಲಿ ಆರಂಭಗೊಂಡ ಕಾಳಿನದಿ ನೀರಾವರಿ ಯೋಜನೆಯನ್ನು ಮುಕ್ತಾಯಗೊಳಿಸಲು, ಹಳಿಯಾಳ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಕಾಳಿನದಿಯಿಂದ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಶೇಷ ಕಾಳಜಿ ವಹಿಸಲಾಗುವುದು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಅವರು ಮುಖ್ಯಮಂತ್ರಿಯಾಗಿ ಹೆಚ್ಚಿನ ದಿನ ಉಳಿಯಲಾರರು, ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯಾಗುವುದು ಎಂದು ಎಂಎಲ್‌ಸಿ ಎಸ್‌.ಎಲ್‌. ಘೋಟ್ನೇಕರ ವಿಶ್ವಾಸ ವ್ಯಕ್ತಪಡಿಸಿದರು.

loading...