ಜನಪರ ಹೋರಾಟ ಮುಂದುವರೆಸುವೆ: ಸುನೀಲ

0
15
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ವಿಧಾನಸಭಾ ಚುನಾವಣೆಯಲ್ಲಿ 5140 ಮತಗಳ ಅಂತರದಿಂದ ಪರಾಭವಗೊಂಡಿದ್ದರೂ ಸಹ ಕ್ಷೇತ್ರದ 56 ಸಾವಿರಕ್ಕೂ ಹೆಚ್ಚಿನ ಮತದಾರರು ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಜನಪರ ಹೋರಾಟವನ್ನು ಮುಂದುವರಿಸುವದಾಗಿ ಭಾಜಪ ಪರಾಜಿತ ಅಭ್ಯರ್ಥಿ ಸುನೀಲ ಹೆಗಡೆ ತಿಳಿಸಿದರು.
ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಳಿಯಾಳ-ದಾಂಡೇಲಿ-ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ದಾಂಡೇಲಿ ನಗರ, ಹಳಿಯಾಳ ಪಟ್ಟಣ ಮತ್ತು ಜೋಯಿಡಾ ತಾಲೂಕಿನ ರಾಮನಗರ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಮಾತ್ರ ಎದುರಾಳಿಗಿಂತ ನಮಗೆ ಕಡಿಮೆ ಮತ ದೊರೆತಿದೆ. ಉಳಿದಂತೆ ಜೋಯಿಡಾ ಹಾಗೂ ಹಳಿಯಾಳ ತಾಲೂಕಿನ ತೇರಗಾಂವ, ಮುರ್ಕವಾಡ, ಕಾವಲವಾಡ, ಅಂಬಿಕಾನಗರ ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ಮತದಾರರು ಕಾಂಗ್ರೆಸ್‍ಗಿಂತ ತಮಗೆ ಹೆಚ್ಚಿನ ಮತ ನೀಡಿದ್ದಾರೆ. ತುಂಬಾ ಪ್ರಯಾಸಪಟ್ಟು ಗೆದ್ದ ಆರ್.ವಿ. ದೇಶಪಾಂಡೆಯವರಿಗೆ ತಾಂತ್ರಿಕ ಗೆಲುವು ಅಷ್ಟೇ. ಕ್ಷೇತ್ರದಲ್ಲಿ ವಿಪಕ್ಷವಾದ ಭಾಜಪದ ಶಕ್ತಿಯನ್ನು ಗಟ್ಟಿಗೊಳಿಸಿದ್ದಾರೆ. ಈ ಬಗ್ಗೆ ಮತದಾರರಿಗೆ ಹಾಗೂ ಹಗಲಿರುಳು ದುಡಿದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಕೃತಜ್ಞರಾಗುವುದಾಗಿ ತಿಳಿಸಿದ ಸುನೀಲ ಹೆಗಡೆ ಜನತೆಯ ಪರವಾಗಿ ಪಕ್ಷದ ವತಿಯಿಂದ ಹೋರಾಟ ಮುಂದುವರಿಯುತ್ತದೆ. ಆಡಳಿತದ ಜನವಿರೋಧಿ ಕೆಲಸ ಮಾಡಿದರೆ ಅದರ ವಿರುದ್ಧ ಬೀದಿಗಿಳಿಯಲಾಗುತ್ತದೆ.

ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ರಾಷ್ಟ್ರೀಯವಾದದ ಆಧಾರದ ಮೇಲೆ ರಾಜಕೀಯ ಮಾಡುವ ಭಾರತೀಯ ಜನತಾಪಕ್ಷ ಕೋಮುವಾದಿಗಳಲ್ಲ. ಆದರೆ ಅಲ್ಪಸಂಖ್ಯಾತರಿಗೆ ಎತ್ತಿ ಕಟ್ಟಿದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಸಮಸ್ಯೆ ಸರಿಪಡಿಸದಿದ್ದರೆ ಹೋರಾಟ :- ಹಳಿಯಾಳ ಪುರಸಭೆ ಕಾಂಗ್ರೆಸ್ ಆಡಳಿತ ಮಂಡಳಿಯಲ್ಲಿ ದಲ್ಲಾಳಿಗಳು ತುಂಬಿದ್ದಾರೆ. ಇದರ ಪರಿಣಾಮ ಪುರಸಭೆ ಸರ್ವಾಂಗೀಣ ಅಭಿವೃದ್ಧಿಯಲ್ಲಿ ವಿಫಲಗೊಂಡಿದೆ. ಅವೈಜ್ಞಾನಿಕ ಕಾಮಗಾರಿಗಳನ್ನು ಮಾಡಿ ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂದು ಸುನೀಲ ಹೆಗಡೆ ಪುರಸಭಾ ಸದಸ್ಯರ ಬಗ್ಗೆ ಗಂಭೀರ ಆರೋಪ ಮಾಡಿದರು. ನಾನು ಶಾಸಕನಾಗಿದ್ದಾಗ ಮಂಜೂರಿ ಮಾಡಿಸಿದ್ದ ನಿರಂತರ ನೀರು ಸರಬರಾಜು ಯೋಜನೆಯ ಅನುಷ್ಠಾನದಲ್ಲಿ ಆಗಿರುವ ಭ್ರಷ್ಟಾಚಾರದ ತನಿಖೆಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಹಳಿಯಾಳ ಪಟ್ಟಣದಲ್ಲಿ ಅನುಷ್ಠಾನಗೊಂಡಿರುವ ನಿರಂತರ ನೀರು ಸರಬರಾಜು ಯೋಜನೆಯನ್ವಯ ನೀರಿನ ನಲ್ಲಿ ಸಂಪರ್ಕ ನೀಡಲು ಠೇವಣಿ ತೆಗೆದುಕೊಳ್ಳಬಾರದು ಇಲ್ಲವೇ ಅದನ್ನು ಕಂತು ರೂಪದಲ್ಲಿ ತೆಗೆದುಕೊಳ್ಳಬೇಕು. ಈಗ ಮೀಟರ್‍ನ ಬಳಕೆ ಆಧಾರದ ಮೇಲೆ ನೀರಿನ ಬಿಲ್ ಹೆಚ್ಚಿಗೆ ಇದ್ದು ಅದು ಕಡಿಮೆ ಆಗುವಂತಾಗಬೇಕು. ದಲಾಯತಗಲ್ಲಿಯಲ್ಲಿರುವ ಕಸಾಯಿಖಾನೆಯನ್ನು ಅಕ್ರಮವಾಗಿ ಗೋ ವಧೆ ನಡೆಯುತ್ತಿದೆ. ಹೀಗಾಗಿ ಅದನ್ನು ಅಲ್ಲಿಂದ ತೆರವುಗೊಳಿಸಬೇಕು. ಅಡಿಕೆಹೊಸೂರು ಗ್ರಾಮದಲ್ಲಿಯೂ ಸಹ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆ ಮುಚ್ಚಬೇಕು. ಪಟ್ಟಣದಲ್ಲಿ ಬೇಕಾಬಿಟ್ಟಿ ಎಲ್ಲಿ ನೋಡಿದರಲ್ಲಿ ತಲೆ ಎತ್ತಿರುವ ಚಿಕನ್ ಅಂಗಡಿಗಳನ್ನು ಅಲ್ಲಿಂದ ಬೇರೆಡೆಗೆ ವರ್ಗಾಯಿಸಬೇಕು. ಈ ಮೂರು ಸಮಸ್ಯೆಗಳ ಪರಿಹಾರಕ್ಕೆ 15 ದಿನ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗಾಗಿ ಸಮಸ್ಯೆ ಇತ್ಯರ್ಥಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಸುನೀಲ ಹೆಗಡೆ ಘೋಷಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷ ಶಿವಾಜಿ ನರಸಾನಿ, ಪಟ್ಟಣ ಘಟಕದ ಅಧ್ಯಕ್ಷ ಅಪ್ಪು ಚರಂತಿಮಠ ಹಾಗೂ ಪ್ರಮುಖರಾದ ಅನಿಲ ಮುತ್ನಾಳೆ, ನಾರಾಯಣ ಬೆಳಗಾಂವಕರ, ಅನಿಲ ಗಿರಿ, ತುಕಾರಾಮ ಪಟ್ಟೇಕರ, ವಿಜಯ ಬೋಬಾಟಿ, ಯಲ್ಲಪ್ಪಾ ಸಾಣಿಕೊಪ್ಪ, ಸಂತಾನ ಸಾವಂತ ಮೊದಲಾದವರು ಉಪಸ್ಥಿತರಿದ್ದರು.

loading...