ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಳ: ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು

0
19
loading...

ದೀಪಕ ಶೆಟ್ಟಿ
ಕನ್ನಡಮ್ಮ ಸುದ್ದಿ-ಕಾರವಾರ: ಮದಾನ ಪ್ರಕ್ರಿಯೆ ಕೊನೆಗೊಂಡಿದ್ದು ಈಗ ಅಭ್ಯರ್ಥಿಗಳು ತಮ್ಮ ಗೆಲುವಿನ ಅಂತರ ಹಾಗೂ ತಮ್ಮ ವಿರೋಧಿಗಳು ಪಡೆಯುವ ಮತಗಳ ಬಗ್ಗೆ ತಮ್ಮ ಆತ್ಮೀಯರೊಂದಿಗೆ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 76.30 ರಷ್ಟು ಮತದಾನವಾಗಿದೆ. ಇದು 2013ರ ಚುನಾವಣೆಗಿಂತ ಶೇ.3 ರಷ್ಟು ಹೆಚ್ಚಿಗೆ ಮತದಾನವಾಗಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಹಳಿಯಾಳ ಹೊರತುಪಡಿಸಿ ಉಳಿದ ಐದು ಕ್ಷೇತ್ರಗಳಲ್ಲಿ 2013 ರ ಚುನಾವಣೆಗಿಂತ ಹೆಚ್ಚಿನ ಮತದಾನವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಳಿಯಾಳದಲ್ಲಿ ಶೇ. 76 ಮತದಾನವಾಗಿದ್ದರೆ ಈ ಬಾರಿ ಶೇ.71.65 ಮತದಾನವಾಗಿದೆ. ಅಂದರೆ ಕಳೆದಬಾರಿಗಿಂತ ಶೇ.4.35 ರಷ್ಟು ಕಡಿಮೆ. ಕಾರವಾರ ಕ್ಷೇತ್ರದಲ್ಲಿ ಈ ಬಾರಿ ಶೇ.72.76 ಮತದಾನವಾಗಿದ್ದು ಇದು ಕಳೆದಬಾರಿಗಿಂದ ಶೇ.2.76 ಹೆಚ್ಚಿಗೆ. ಭಟ್ಕಳ, ಕುಮಟಾ, ಶಿರಸಿ ಹಾಗೂ ಯಲ್ಲಾಪುರ ಕ್ಷೇತ್ರಗಳಲ್ಲೂ ಸಹ ಕಳೆದ ಬಾರಿಗಿಂತ ಕ್ರಮವಾಗಿ ಶೇ.3.20, ಶೇ. 6.34, ಶೇ.5.30, ಶೇ.0.80 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ.
ಚುನಾವಣಾ ಆಯೋಗವು ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಹಾಗೂ ಶತಮಾನದ ಮತದಾರರು ಎಂಬ ಘೋಷ ವಾಕ್ಯದೊಂದಿಗೆ ಯುವ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿದ್ದು ಕೆಲ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಕಾರಣವೆನ್ನಬಹುದು. ಕೆಲ ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರು ಮತಗಟ್ಟೆಯ ಹೊರಗೆ ತಮ್ಮ ಶಾಯಿ ಹಚ್ಚಿದ ಕೈಬೆರಳಿನ ಜೊತೆ ತಮ್ಮ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದುದು ಕಂಡು ಬರುತ್ತಿತ್ತು.

ಈಬಾರಿಯ ಮತಪ್ರಮಾಣದ ಹೆಚ್ಚಳವು ಸಹ ಕೆಲ ಪಕ್ಷದ ಅಭ್ಯರ್ಥಿಗಳ ನಡುಕಕ್ಕೆ ಕಾರಣವಾಗಿದೆ. ಬಿಜೆಪಿ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಧ್ಯಮ ವರ್ಗದವರು ಹಾಗೂ ಯುವ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಸಹಜವಾಗಿ ಇವೆಲ್ಲಾ ಬಿಜೆಪಿಯ ವೋಟ್‍ಬ್ಯಾಂಕ್‍ಗಳು. ಯುವ ಮತದಾರರು ಹಾಗೂ ಮಧ್ಯಮವರ್ಗದವರು ಹೆಚ್ಚಿನ ಪ್ರಮಾಣದಲ್ಲಿ ಮತದಾನದಲ್ಲಿ ಭಾಗವಹಿಸಿದ್ದರಿಂದ ಸಹಜವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಈ ಬಾರಿ ಮತದಾನದ ಪ್ರಮಾಣ ಹೆಚ್ಚಿದೆ. ಮತದಾನದ ಪ್ರಮಾಣ ಹೆಚ್ಚಳವಾದಾಗ ಸಹಜವಾಗಿ ಯಾವಾಗಲೂ ಅದು ಬಿಜೆಪಿ ಲಾಭವಾಗಿದೆ ಎಂದು ವಿಶ್ಲೇಷಿಸುತ್ತಾರೆ ಬಿಜೆಪಿಯ ಜಿಲ್ಲಾ ವಕ್ತಾರ ರಾಜೇಶ ನಾಯಕ.
ಆದರೆ ಕಾರವಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರ ಲೆಕ್ಕಾಚಾರವೇ ಬೇರೆ. ಕ್ಷೇತ್ರದಲ್ಲಿ ಈ ಬಾರಿ ಯುವಕರು ಹಾಗೂ ಎಲ್ಲಾ ವರ್ಗದ ಮತದಾರರು ತಮ್ಮ ಪಕ್ಷ ಹಾಗೂ ತಮ್ಮನ್ನು ಬೆಂಬಲಿಸುವ ಸಲುವಾಗಿ ವ್ಯಾಪಕವಾಗಿ ಮತದಾನ ಮಾಡಿದರು. ಹೀಗಾಗಿ ಮತದಾನದ ಪ್ರಮಾಣದಲ್ಲೂ ಸಹ ಹೆಚ್ಚಳವಾಗಿದೆ ಎಂದು ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಈಮಧ್ಯೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡವರಿಗೆ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ಈ ಯೋಜನೆಯ ಫಲಾನುಭವಿಗಳು ಸರ್ಕಾರದ ಯೋಜನೆ ಮೆಚ್ಚಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದರು. ಹೀಗಾಗಿ ಮತದಾನದ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದು ನೇರವಾಗಿ ಕಾಂಗ್ರೇಸ್ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂಬುದು ಕೆಲ ಕಾಂಗ್ರೇಸ್ ನಾಯಕರುಗಳ ಲೆಕ್ಕಾಚಾರ.

loading...