ತಾಲೂಕಿನಾದ್ಯಂತ ಜೂ.1 ರಂದು ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ

0
23
loading...

ಕನ್ನಡಮ್ಮ ಸುದ್ದಿ-ಕುಮಟಾ: ರೈತನ ಬದುಕು ಹಸನಗೊಳಿಸಲು ಸಮಗ್ರ ಕೃಷಿ ಅಭಿಯಾನ ಯೋಜನೆ ಅಡಿಯಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮದ ಮೂಲಕ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ಜೊತೆ ರೈತ ಉಪಕಸಬುಗಳನ್ನು ಅಳವಡಿಸುವುದು ಅನಿವಾರ್ಯವಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಶಂಕರ ಹೆಗಡೆ ತಿಳಿಸಿದರು.
ಕೃಷಿ ಇಲಾಖೆಯ ಸಭಾಭವನದಲ್ಲಿ ಕೃಷಿ ಇಲಾಖೆಯ ಸಮಗ್ರ ಕಾರ್ಯಕ್ರಮಗಳ ಕುರಿತು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕೃಷಿ ವಲಯದ ಪ್ರಸಕ್ತ ಸನ್ನಿವೇಶದ ಪರಿಸ್ಥಿತಿಯಲ್ಲಿ ಉತ್ಪಾದನೆ ಹೆಚ್ಚಿಸುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನವನ್ನು ತಲುಪಿಸಲು ಏಕಗವಾಕ್ಷಿ ವಿಸ್ತರಣಾ ಪದ್ಧತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ತಲುಪಿಸಲು ವಿವಿಧ ಅಭಿವೃದ್ಧಿ ಇಲಾಖೆಯ ಸಮನ್ವಯದೊಂದಿಗೆ ಸಮೂಹ ಜಾಗೃತಿ ಕಾರ್ಯಕ್ರಮ “ಸಮಗ್ರ ಅಭಿಯಾನ”ವನ್ನು ರೂಪಿಸಲಾಗಿದೆ. ಕೃಷಿ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು, ಉತ್ಪಾದಕತೆ ಹೆಚ್ಚಿಸಲು ತಾಂತ್ರಿಕತೆ ಕುರಿತು ಮನವರಿಕೆ ಮಾಡಿಕೊಡುವುದು ವಿಜ್ಞಾನಿಗೊಳೊಂದಿಗೆ ರೈತರ ಸಂವಾದ ರೂಪಿಸಲಾಗಿದೆ. ಕೃಷಿಕನಿಗೆ ಕೃಷಿ ಸಂಬಂಧಿತ ಸಮಗ್ರ ಮಾಹಿತಿ ನೀಡಲು ಸಮಗ್ರ ಕೃಷಿ ಮಾಹಿತಿ ಘಟಕ, ಕೃಷಿ ವಸ್ತು ಪ್ರದರ್ಶನ, ರೈತ ಸಂವಾದ ಹಮ್ಮಿಕೊಳ್ಳಲಾಗಿದೆ.

ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಜೂನ್ 1ರಂದು 4 ಹೋಬಳಿಗಳಲ್ಲಿ 3 ದಿನಗಳ ವರೆಗೆ ನಡೆಯಲಿದೆ. ಮೊದಲು 2 ದಿನ ಗ್ರಾಮ ಪಂಚಾಯತ ಮಟ್ಟದಲ್ಲಿ ಮಾಹಿತಿ ಘಟಕ ಸಂಚಾರ ಮಾಡಲಿವೆ. ಅಲ್ಲದೇ ರೈತರಿಗೆ ಕೃಷಿ ವಿಚಾರವನ್ನು ತಿಳಿಸಿಕೊಡಲಾಗುವುದು. 3ನೇ ದಿನ ನಡೆಯುವ ರೈತರ ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖಾ ಮುಖ್ಯಸ್ಥರು ಹಾಗೂ ವಿಜ್ಞಾನಿಗಳು ಸಂವಾದ ಕಾರ್ಯಕ್ರಮ ನಡೆಸಿಕೊಡುವರು. ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಆಧುನಿಕ ಯಂತ್ರೋಪಕರಣಗಳು ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗುತ್ತದೆ. ಅಲ್ಲದೇ ಕೆಲವು ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ಜೂನ್ 1ರಂದು ಬೆಳಿಗ್ಗೆ 10 ಗಂಟೆಗೆ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಆವರಣದಲ್ಲಿ ಅಭಿಯಾನ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸುವರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತೋಟಗಾರಿಕಾ ಸಹಾಯಕ ನಿರ್ದೇಶಕ ಕೆ ಪಿ ಚಿದಾಂಬರ್ ಇದ್ದರು.

loading...