ತಾಲೂಕಿನ ದೀವಳ್ಳಿಯ ಅಘನಾಶಿನಿ ಹಳ್ಳದಲ್ಲಿ ನೀರಿನ ಮಟ್ಟ ಕುಸಿತ

0
14
loading...

ಕುಮಟಾ : ಮರಾಕಲ್‌ ನೀರು ಸರಬರಾಜು ಯೋಜನೆಯ ನೀರಿನ ಮೂಲವಾದ ದೀವಳ್ಳಿಯ ಅಘನಾಶಿನಿ ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಕುಮಟಾ ಮತ್ತು ಹೊನ್ನಾವರ ಪಟ್ಟಣಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಉಂಟಾಗಿದೆ.
ಕುಮಟಾ-ಹೊನ್ನಾವರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಜಂಟಿ ಯೋಜನೆಯಾದ ಮರಾಕಲ್‌ ನೀರು ಸರಬರಾಜು ಯೋಜನೆಗೆ ಅಘನಾಶಿನಿ ನದಿಗೆ ಸೇರುವ ದೀವಳ್ಳಿ ಹಳ್ಳವೇ ನೀರಿನ ಮೂಲವಾಗಿದೆ. ಎರಡು ವರ್ಷಗಳ ಹಿಂದಿನ ಮಾರ್ಚ್‌ ತಿಂಗಳಲ್ಲೆ ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ, ಯೋಜನೆಗೆ ನೀರಿನ ಅಭಾವ ಉಂಟಾಗಿತ್ತು. ಹಾಗಾಗಿ ಎರಡು ಪಟ್ಟಣಗಳಿಗೆ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಅಲ್ಲದೆ ಮರಾಕಲ್‌ ಯೋಜನೆಯ ನೀರು ಪಂಪ್‌ ಮಾಡಿ, ಶುದ್ಧೀಕರಿಸುವ ಘಟಕದಲ್ಲಿ ಮೋಟರ್‌ ಸೇರಿದಂತೆ ಟಿಸಿಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ನೀರು ಸರಬರಾಜು ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ಈ ವರ್ಷ ತಾಂತ್ರಿಕ ಸಮಸ್ಯೆಗಳಿಲ್ಲದಿದ್ದರೂ ನದಿಯಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದರಿಂದ ನೀರಿನ ಅಭಾವ ಉಂಟಾಗಲಿದೆ. ಇದರಿಂದ ಕುಮಟಾ ಮತ್ತು ಹೊನ್ನಾವರ ಪಟ್ಟಣಗಳಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಕಂಡುಬಂದಿದೆ.
ಅಲ್ಲದೇ ದೀವಳ್ಳಿ ಹಳ್ಳಕ್ಕೆ ಎರಡು ವರ್ಷದ ಹಿಂದ 10 ಲಕ್ಷ ರೂ ಗಳಲ್ಲಿ 70 ಮೀ ಉದ್ದದ ಹಾಗೂ 5 ಅಡಿ ಎತ್ತರದ ಕಾಂಕ್ರೀಟ್‌ ಬಂಡ್‌ ನಿರ್ಮಿಸಿದ್ದರಿಂದ ಕಳೆದ ವರ್ಷ ಏಪ್ರಿಲ್‌ ತಿಂಗಳವರೆಗೆ ನೀರಿನ ಸಮಸ್ಯೆಯಾಗಿಲ್ಲ. ಹಾಗಾಗಿ ಈ ವರ್ಷ ಈಗಾಗಲೇ ನಿರ್ಮಿಸಿದ್ದ ಬಂಡ್‌ನ ಎತ್ತರವನ್ನು 5ಅಡಿಯಿಂದ 8.5 ಅಡಿಗೆ ಹೆಚ್ಚಿಸಲು ಹಾಗೂ 70 ಮೀಟರ್‌ನಿಂದ 100 ಮೀ ವರೆಗೆ ಅಗಲವನ್ನು ವಿಸ್ತರಿಸಲು 15 ಲಕ್ಷ ರೂ ಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ನೀರಿನ ಸಂಗ್ರಹಣೆ ದುಪ್ಪಟ್ಟಾಗುವುದರಿಂದ ಮುಂದಿನ ವರ್ಷ ನೀರಿನ ಸಮಸ್ಯೆ ನಿವಾರಣೆಯಾಗುವ ಸಾಧ್ಯತೆ ಇದೆ.

loading...