ದೇಶಪಾಂಡೆಯವರಿಗೆ ಕಾಳಿನದಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಬದ್ಧತೆ ಇಲ್ಲ

0
10
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಕ್ಷೇತ್ರದ ಜನತೆ ಸ್ಥಿತಿವಂತರಾಗುವುದು ಆರ್‌.ವಿ. ದೇಶಪಾಂಡೆಯವರಿಗೆ ಬೇಕಾಗಿಲ್ಲ. ಹೀಗಾಗಿ ಅವರಿಗೆ ಕಾಳಿನದಿ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬದ್ಧತೆ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಸುನೀಲ ಹೆಗಡೆ ಆರೋಪಿಸಿದ್ದಾರೆ.
ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸುನೀಲ ಹೆಗಡೆ ಮಾತನಾಡುತ್ತಾ ಪ್ರತಿಸ್ಪರ್ಧಿಯಾದ ಆರ್‌.ವಿ. ದೇಶಪಾಂಡೆ ವಿರುದ್ಧ ಆರೋಪಗಳ ಸುರಿಮಳೆಗೈದರು.
ಕಾಳಿನದಿ ನೀರಾವರಿ ಯೋಜನೆ ಆರ್‌.ವಿ. ದೇಶಪಾಂಡೆಯವರ ರಾಜಕೀಯ ಗಿಮಿಕ್‌ ಆಗಿದೆ ಎಂದು ಪುನರುಚ್ಛರಿಸಿದ ಅವರು 1983 ರಿಂದ ಈ ಭಾಗದ ಶಾಸಕರಾಗುತ್ತಾ ಬಂದಿರುವ ಒಂದು ಅವಧಿಯಲ್ಲಿ ಮಾತ್ರ ಶಾಸಕರಾಗಿರದ ದೇಶಪಾಂಡೆ ಸರಕಾರದಲ್ಲಿ ಪ್ರಭಾವಿ ಸಚಿವರಾಗಿದ್ದರೂ ಸಹ ಕಾಳಿನದಿ ನೀರಾವರಿ ಯೋಜನೆ ಮಂಜೂರಿ ಮಾಡದೇ ಮತದಾರರಿಗೆ ನ್ಯಾಯ ದೊರಕಿಸಿಕೊಡಲಿಲ್ಲ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ರಾಜ್ಯ ಸರ್ಕಾರದ ಮೊದಲ ಬಜೆಟ್‌ನಲ್ಲಿ ಕಾಳಿನದಿ ನೀರಾವರಿ ಯೋಜನೆ ಪ್ರಸ್ತಾಪಿಸಲಾಗಿತ್ತು ಎನ್ನುವ ದೇಶಪಾಂಡೆಯವರಿಗೆ ಐದು ವರ್ಷದ ಅವಧಿ ಮುಕ್ತಾಯವಾಗುವವರೆಗೂ ಸಹ ಹಳಿಯಾಳ ತಾಲೂಕಿನ ರೈತರ ಗದ್ದೆಗಳಿಗೆ ನೀರು ನೀಡಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ಆರ್‌.ವಿ. ದೇಶಪಾಂಡೆಯವರ ಪುತ್ರ ಪ್ರಶಾಂತ ದೇಶಪಾಂಡೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಕ್ಷೇತ್ರಕ್ಕೆ ಬರುತ್ತಾರೆ. ಉಳಿದಂತೆ ಜನಸಂಪರ್ಕ ಇಲ್ಲದ ಅವರಿಗೆ ಜನರ ನಾಡಿಮಿಡಿತ ಗೊತ್ತಿಲ್ಲ. ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ ಇವರು ಸಹ ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ರಾಜಕಾರಣದಲ್ಲಿದ್ದಾರೆ. ಹೊರತು ಸಮಾಜಸೇವೆಗಾಗಿ ಅಲ್ಲ.
ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಜನಪರ ಕಾರ್ಯಗಳು, ರಾಜ್ಯ ಬಿಜೆಪಿಯ ಭರವಸೆಗಳು ಇವುಗಳ ಆಧಾರದ ಮೇಲೆ ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿಯಾದ ತನಗೆ ಆಶೀರ್ವದಿಸಿ ಮತ ನೀಡಿ ಚುನಾಯಿತನನ್ನಾಗಿಸುವ ಖಚಿತ ವಿಶ್ವಾಸವಿದೆ ಎಂದರು ಸುನೀಲ ಹೆಗಡೆ.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷ ಶಿವಾಜಿ ನರಸಾನಿ, ಪ್ರಮುಖರಾದ ಶ್ರೀಪತಿ ಭಟ್‌, ಎಸ್‌.ಎ. ಶೆಟವಣ್ಣವರ, ವಿ.ಎಂ. ಪಾಟೀಲ, ಅಪ್ಪು ಚರಂತಿಮಠ, ವಿಲಾಸ ಯಡವಿ, ಅನಿಲ ಗಿರಿ, ವಾಸುದೇವ ಪೂಜಾರಿ, ಅನಿಲ ಮುತ್ನಾಳ, ಅಪ್ಪಾಸಾಹೇಬ ದೇಸಾಯಿ, ಅಪ್ಪಾರಾವ್‌ ಪೂಜಾರಿ ಮೊದಲಾದವರಿದ್ದರು.

loading...