ನೀಫಾ ಎನ್ಸಫಲೈಟೀಸ್ ಮಾರಣಾಂತಿಕ ಕಾಯಿಲೆ: ವೈರಾಣು ಜ್ವರ ಹರಡುವಿಕೆ

0
22
loading...

ಮೌಲಾಹುಸೇನ ಬುಲ್ಡಿಯಾರ್

ಕೊಪ್ಪಳ : ನೀಫಾ ವೈರಾಣು ಜ್ವರಕ್ಕೆ ನೀಫಾ ಎನ್ಸಫಲೈಟೀಸ್ ಎಂದು ಹೆಸರಿಸಲಾಗಿದೆ. 1998 ರಲ್ಲಿ ಮಲೇಶಿಯಾ ಮತ್ತು ಸಿಂಗಪುರ ದೇಶಗಳಲ್ಲಿ ಮೊದಲ ಬಾರಿಗೆ ಕಂಡು ಬಂದಿದೆ. ಮಲೇಶಿಯಾದ ನೀಫಾ ಎಂಬ ಗ್ರಾಮದಲ್ಲಿಈ ವೈರಾಣುವನ್ನು ಪ್ರತ್ಯೇಕಿಸಿರುವುದರಿಂದ ಇದಕ್ಕೆ ನೀಫಾ ವೈರಾಣು ಜ್ವರ ಎಂದು ಹೆಸರಿಡಲಾಗಿದೆ. ಈ ಜ್ವರ ಬಾವಲಿ, ಹಂದಿ, ನಾಯಿ, ಕುರಿ, ಬೆಕ್ಕು ಹಾಗೂ ಮನುಷ್ಯರಿಗೆ ಭಾದಿಸುತ್ತದೆ. ಇದು ಮಲೇಶಿಯಾ, ಸಿಂಗಪುರ, ಭಾರತ ಮತ್ತು ಬಾಂಗ್ಲಾ ದೇಶಗಳಲ್ಲಿ ಕಾಣಿಸಿಕೊಂಡಿದೆ.
ರೋಗದ ಲಕ್ಷಣಗಳು : ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ ಬರುವುದು. ಪ್ರಜ್ಞಾಹೀನತೆಗೆ ಒಳಗಾಗುವುದು. ಅತೀಯಾದ ಜ್ವರ ಮೆದುಳಿಗೆ ವ್ಯಾಪಿಸುವುದು. ಮಾತುಗಳಲ್ಲಿ ತೊದಲುವಿಕೆ ಹಾಗೂ ಅಪಸ್ವರದ ಲಕ್ಷಣಗಳು ಕಾಣಿಸಿಕೊಳ್ಳುವುದು. ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವ. ಸೊಂಕಿತ ದಿನದಿಂದ 4 ರಿಂದ 18 ದಿನಗಳಲ್ಲಿ ನಿಫಾ ವೈರಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರೋಗದ ಲಕ್ಷಣಗಳು ಮನುಷ್ಯರಲ್ಲಿ ಜ್ವರ, ತಲೆನೋವು, ತಲೆಸುತ್ತುವಿಕೆ, ದಿಗ್ಬ್ರಮೆ, ಮಾನಸಿಕಗೊಂದಲ, ಜ್ಞಾನ ತಪ್ಪುವುದು. ನಂತರ ಸಾವು ಸಂಭವಿಸಬಹುದು. ಪ್ರಾಣಿಗಳಲ್ಲಿ ಹಂದಿಗಳಲ್ಲಿ ಉಸಿರಾಟದ ತೊಂದರೆ, ನರದೌರ್ಬಲ್ಯ (ನರಮಂಡಲದ ಸಿಂಡ್ರೋಮ್). ಕಂಡುಬರುತ್ತದೆ.

ರೋಗ ನಿರ್ಧಾರ ಮಾಡುವ ವಿಧಾನ : ನೀಫಾ ವೈರಾಣು ರೋಗವನ್ನು ನಿರ್ಧಾರ ಮಾಡುವ ವಿಧಾನಗಳು ಇಂತಿವೆ. ಸೊಂಕಿತ ವ್ಯಕ್ತಿಯ ಗಂಟಲಿನ ಮತ್ತು ಮೂಗಿನ ದ್ರವಗಳ ಮಾದರಿಯನ್ನು ಪಡೆದು, ಪ್ರಯೋಗಾಲಯದಲ್ಲಿ ಪರೀಕ್ಷಿಸಿ ದೃಢಪಡಿಸಬಹುದು. ಅಲ್ಲದೆ ಸೊಂಕಿತ ವ್ಯಕ್ತಿಯ ನರಮಂಡಲದ ದ್ರವ, ಮೂತ್ರ ಮತ್ತು ರಕ್ತ ಪರೀಕ್ಷೆಯ ಮೂಲಕ ಖಚಿತ ಪಡಿಸಿಕೊಳ್ಳಬಹುದು. ಪ್ರಸ್ತುತ ಈ ಪರೀಕ್ಷೆಯನ್ನು ರಾಷ್ಟ್ರೀಯ ವೈರಾಣು ಸಂಸ್ಥೆ ಪುಣೆ ಇಲ್ಲಿ ನಡೆಸಲಾಗುವುದು.
ನಿಫಾ ವೈರಸ್ ಜ್ವರ ಹರಡುವ ವಿಧಾನ :ನಿಪಾ ವೈರಸ್ ಜ್ವರ ಹರಡುವ ವಿಧಾನ ಇಂತಿದೆ. ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳು ಬಿಸಾಡಿದ ಹಣ್ಣು ಹಂಪಲುಗಳನ್ನು ಸೇವಿಸುವುದರ ಮೂಲಕ ಇತರ ಪ್ರಾಣಿಗಳಿಗೆ ಹರಡುತ್ತದೆ. ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಹರಡುತ್ತದೆ. ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ಪ್ರಾಣಿಯ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ಮನುಷ್ಯನ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಆರೋಗ್ಯವಂತ ಮನುಷ್ಯರಿಗೆ ಹರಡುತ್ತದೆ.

ಮುಂಜಾಗೃತಾ ಕ್ರಮಗಳು : ನೀಫಾ ವೈರಾಣುವನ್ನು ಹರಡದಂತೆ ಸಾರ್ವಜನಿಕರು ಅನುಸರಿಸಬಹುದಾದ ಮುಂಜಾಗೃತಾ ಕ್ರಮಗಳು ಇಂತಿವೆ. ಯಾವುದೇ ರೀತಿಯ ಜ್ವರ ಕಂಡು ಬಂದಲ್ಲಿ ಉದಾಸೀನ ಮಾಡದೇ ಹಾಗೂ ನಿಪಾ ವೈರಸ್ ಲಕ್ಷಣಗಳಿರುವ ಜ್ವರ ಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿರುವ ತೆರೆದ ಬಾವಿಯ ನೀರನ್ನು ಶುದ್ದೀಕರಿಸಿ ಸೇವಿಸುವುದು ಹಾಗೂ ಬಾವಿಗಳನ್ನು ಬಲೆಗಳಿಂದ ಮುಚ್ಚಿ ಬಾವಲಿಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳುವುದು ಸೂಕ್ತ. ಈ ವೈರಸ್ ಜ್ವರವು ನೇರ ಸಂಪರ್ಕದಿಂದ ಹರಡುವುದರಿಂದ ಸೊಂಕಿತ ವ್ಯಕ್ತಿ ಮತ್ತು ಪ್ರಾಣಿಗಳಿಂದ (ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕೆಲವು ಸಂದರ್ಭದಲ್ಲಿ ಕುರಿಗಳು) ದೂರವಿರುವುದು ಸೂಕ್ತವಾಗಿರುತ್ತದೆ ಅಲ್ಲದೆ ಸಾರ್ವಜನಿಕರು ಅತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ.

ನಿಫಾ ರೋಗವನ್ನು ಎಲೀಸಾ ಆಧಾರಿತ ರಕ್ತ ಪರೀಕ್ಷೆಯಿಂದ ನೀಫಾ ವೈರಾಣುಗಳನ್ನು ಗುರುತಿಸಬಹುದು. ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯಿಂದ ಈ ರೋಗವನ್ನು ದೃಢಪಡಿಸಲಾಗುತ್ತದೆ. ಈ ರೀತಿಯಾಗಿ ರೋಗವನ್ನು ಪತ್ತೆ ಹಚ್ಚಬಹುದಾಗಿದೆ. ನೀಫಾ ವೈರಾಣು ಜ್ವರದ ಬಗ್ಗೆ ಆತಂಕ ಬೇಡ ಎಚ್ಚರವಿರಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಸಹಾಯವಾಣಿ ಶುಲ್ಕ ರಹಿತ ಸಂಖ್ಯೆ 104 ಕ್ಕೆ ಸಂಪರ್ಕಿಸಬಹುದು.
ಡಾ. ಎಮ್.ಎಮ್ ಕಟ್ಟಿಮನಿ

ಜಿಲ್ಲಾ ಸರ್ವೇಕ್ಷಣಾಧಿಕಾರಿ

loading...