ನ್ಯಾಯ ಸಮ್ಮತ ಚುನಾವಣೆಗೆ ತೀವ್ರ ನಿಗಾ ಅವಶ್ಯ: ಕನಗವಲ್ಲಿ

0
6
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮೈಕ್ರೋ ಅಬ್ಸರ್ವರ್ಸ್‌ಗಳು ಮತದಾನ ದಿನದಂದು ತೀವ್ರ ನಿಗಾ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಚುನಾವಣೆ ಕಾರ್ಯಕ್ಕೆ ನೇಮಕಗೊಂಡಿರುವ ಮೈಕ್ರೋ ಅಬ್ಸರ್ವರ್ಸ್‌ ಗಳಿಗೆ ಮಂಗಳವಾರ ಏರ್ಪಡಿಸಿದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮತಗಟ್ಟೆಯಲ್ಲಿ ಯಾವುದೇ ಅಕ್ರಮ ಹಾಗೂ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೆ ಸಂಬಂಧಪಟ್ಟ ಕ್ಷೇತ್ರದ ಚುನಾವಣಾ ವೀಕ್ಷಕರಿಗೆ ಮತ್ತು ಸೆಕ್ಟರ್‌ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮತಗಟ್ಟೆಯ ಒಳಗಡೆ ಇನ್ನಿತರೆ ಯಾವುದೇ ಸಂಶಯಾಸ್ಪದ ಪ್ರಕರಣಗಳು ಕಂಡುಬಂದಲ್ಲಿ, ತಮ್ಮ ವರದಿಯನ್ನು ಲಿಖಿತವಾಗಿ ಡಿ-ಮಸ್ಟರಿಂಗ್‌ ಸಮಯದಲ್ಲಿ ಸಲ್ಲಿಸುವ ಅವಕಾಶ ಮೈಕ್ರೋ ಅಬ್ಸರ್ವರ್ಸ್‌ಗಳಿಗೆ ನೀಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯನ್ನು ನಿಸ್ಪಕ್ಷಪಾತವಾತವಾಗಿ ನಡೆಸಲು ಎಲ್ಲ ಮೈಕ್ರೋ ಅಬ್ಸರ್ವರ್ಸ್‌ಗಳು ಪ್ರಾಮಾಣಿಕವಾಗಿ ಶ್ರಮಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚಿಸಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಶಂಕರನಾರಾಯಣನ್‌ ಅವರು ಮಾತನಾಡಿ, ಸುಗಮ ಚುನಾವಣೆಗೆ ಮೈಕ್ರೋ ಅಬ್ಸರ್ವರ್ಸ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮತದಾನ ಪ್ರಾರಂಭದ ಹಂತದಿಂದ ಮೊದಲುಗೊಂಡು, ಮುಕ್ತಾಯದ ಹಂತರ ಹಾಗೂ ಆಯಾ ಮತಗಟ್ಟೆಗೆ ಸಂಬಂಧಿತ ಮತಯಂತ್ರ ದಾಸ್ತಾನು ಕೊಠಡಿ ತಲುಪುವವರೆಗೂ, ಮೈಕ್ರೋ ಅಬ್ಸರ್ವರ್‌ಗಳು ತೀವ್ರ ನಿಗಾ ವಹಿಸಿ, ಎಲ್ಲವೂ ಸುಗಮವಾಗಿ ಜರುಗಿದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದರು. ಕನಕಗಿರಿ-ಗಂಗಾವತಿ ಕ್ಷೇತ್ರದ ಚುನಾವಣಾ ವೀಕ್ಷಕ ಜಾಯ್‌ಸಿಂಗ್‌, ಯಲಬುರ್ಗಾ-ಕುಷ್ಟಗಿ ಕ್ಷೇತ್ರದ ವೀಕ್ಷಕ ಕೆ.ಎನ್‌. ಸತೀಶ್‌ ಅವರು ಮಾತನಾಡಿದರು.

loading...